ಕನ್ನಡಪ್ರಭ ವಾರ್ತೆ ಬೇಲೂರುಒನಕೆ ಓಬವ್ವ ಮಹಿಳಾ ಶಕ್ತಿಯ ಸಂಕೇತ ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ವೀರ ವನಿತೆ ಒನಕೆ ಓಬವ್ವರವರ 367ನೇ ಜಯಂತಿಯಲ್ಲಿ ಮಾತನಾಡಿ, ಕರ್ನಾಟಕ ಇತಿಹಾಸದಲ್ಲಿ ಶೌರ್ಯ, ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿ ನಿಂತ ಮಹಿಳೆಯರಲ್ಲಿ ಒನಕೆ ಓಬವ್ವ ಹೆಸರು ಚಿರಸ್ಮರಣೀಯ. ಈಗಿನ ಹೆಣ್ಣುಮಕ್ಕಳಿಗೆ ಓಬವ್ವ ಅವರ ಸಾಹಸ ಸ್ಫೂರ್ತಿಯಾಗಬೇಕು. ಜಯಂತಿ ಆಚರಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಅವರ ಆದರ್ಶಗಳನ್ನು ಅನುಸರಿಸುವ ಸಂಕಲ್ಪದ ದಿನವಾಗಬೇಕು ಎಂದರು. ಮಹಿಳಾ ಶಕ್ತಿಯ ಪ್ರತ್ಯಕ್ಷ ರೂಪವೇ ಓಬವ್ವ. ಮದಕರಿ ನಾಯಕನ ಕಾಲದಲ್ಲಿ ಹೈದರಾಲಿಯ ಸೈನಿಕರಿಂದ ಚಿತ್ರದುರ್ಗ ಕೋಟೆಯನ್ನು ಕೇವಲ ಒನಕೆಯಿಂದ ರಕ್ಷಿಸಿದ ಅವರ ಸಾಹಸ ಇಂದಿಗೂ ಇತಿಹಾಸದಲ್ಲಿ ಬೆಳಗುತ್ತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಜಿ.ಟಿ. ಇಂದಿರಾ ಮಾತನಾಡಿ, ಒನಕೆ ಓಬವ್ವ ಕೇವಲ ಚರಿತ್ರೆಯ ಪಾತ್ರವಲ್ಲ, ಮಹಿಳಾ ಶಕ್ತಿಯ ಅಜರಾಮರ ಸಂಕೇತ. ಅವರ ಧೈರ್ಯ ಮತ್ತು ಕಾರ್ಯ ಇಂದಿನ ಪೀಳಿಗೆಗೆ ಮಾದರಿ ಎಂದು ತಿಳಿಸಿದರು.ಕಸಾಪ ಅಧ್ಯಕ್ಷ ಮಂಜೆಗೌಡ, ರಮೇಶ್, ಹಾಗೂ ಇತರರು ಮಾತನಾಡಿ, ಮನಸ್ಸಿದ್ದರೆ ಮಹಿಳೆಯರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಓಬವ್ವ ಅವರ ಸಾಹಸ ಜೀವಂತ ಸಾಕ್ಷಿ, ಮುಂದಿನ ದಿನಗಳಲ್ಲಿ ಓಬವ್ವ ಜಯಂತಿಯಂದು ಮಹಿಳೆಯರಿಗೆ ಗೌರವ ಪ್ರದಾನ ಮಾಡುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ರಾಜಗೆರೆ ನಿಂಗರಾಜು, ಹುಲಿಕೆರೆ ನಿಂಗರಾಜು, ಈಶ್ವರ ಪ್ರಸಾದ್, ಸತೀಶ್, ಲೋಕೇಶ್, ಶಶೀಧರ್ ಮೌರ್ಯ, ರಂಗನಾಥ್, ವೃತ್ತ ನಿರೀಕ್ಷಕ ರೇವಣ್ಣ, ಸಮಾಜ ಕಲ್ಯಾಣ ಇಲಾಖೆಯ ಲಿಂಗರಾಜು, ಅರಣ್ಯ ವಲಯ ಅಧಿಕಾರಿ ಲಾವಣ್ಯ, ಪಿಎಸ್ಐ ಶಿವಾನಂದ ಪಾಟೀಲ್, ರೆವಿನ್ಯೂ ಇನ್ಸ್‌ಪೆಕ್ಟರ್ ಹೇಮಂತ್, ತೆಂಡೇಕೆರೆ ರಮೇಶ್, ನಟರಾಜ್, ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.