ಹೊನ್ನಾವರ: ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿನ ವಾಸ್ತವ್ಯ ಮತ್ತು ಸಾಗುವಳಿದಾರರ ಸುಮಾರು ೧,೫೮,೬೧೩ ಕುಟುಂಬಗಳು ಭೂಮಿ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಗಂಭೀರ ಚಿಂತನೆ ಅವಶ್ಯ ಎಂದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಕಂದಾಯದ ವಿವಿಧ ಕಾನೂನಿನಲ್ಲಿ ವಸತಿ ಮತ್ತು ಸಾಗುವಳಿಗಾಗಿ ನಗರ ಮತ್ತು ಗ್ರಾಮೀಣ ಭಾಗದಿಂದ ಒಟ್ಟು ೭೩,೭೨೫ ಅರ್ಜಿಗಳು ತಿರಸ್ಕಾರವಾಗಿದೆ. ಕೇವಲ ೬,೪೮೯ ಕಂದಾಯ ಭೂಮಿ ಹಕ್ಕು ಪತ್ರ ದೊರಕಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೫,೮೧೯ ಅರ್ಜಿಗಳಲ್ಲಿ ೨,೮೫೨ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ ಎಂದು ಸರ್ಕಾರಿ ದಾಖಲೆ ಉಲ್ಲೇಖಿಸಿ ಹೇಳಿದರು.
ಸಂಚಾಲಕರಾದ ಮಹೇಶ ನಾಯ್ಕ ಕಾನಕ್ಕಿ, ನಗರ ಅಧ್ಯಕ್ಷ ಸುರೇಶ ಮೇಸ್ತಾ, ಜಿಲ್ಲಾ ಸಂಚಾಲಕ ರಾಮ ಮರಾಠಿ, ಗಿರೀಶ ನಾಯ್ಕ ಚಿತ್ತಾರ, ವಿನೋದ ನಾಯ್ಕ, ದಾವುದ್, ರಫೀಕ ಪ್ರಭಾತನಗರ, ಜನಾರ್ದನ ನಾಯ್ಕ, ಗಣೇಶ ನಾಯ್ಕ, ಮಾರುತಿ ಆರ್. ನಾಯ್ಕ ಉಪಸ್ಥಿತರಿದ್ದರು.ವಿವಿಧ ಕಾನೂನಿನಲ್ಲಿ ಅರ್ಜಿಭೂಕಂದಾಯ ಕಾಯಿದೆ ನಮೂನೆ ೫೭ (೧೮೪೨), ಗ್ರಾಮೀಣ (೯೬೫೧), ನಮೂನೆ ೫೩ (೨೬,೨೫೮), ನಮೂನೆ ೫೦ (೩೯,೦೧೬) ನಗರ ಅತಿಕ್ರಮಣ ೫,೩೬೮ ಕಂದಾಯ ಭೂಮಿಗೆ ಅರ್ಜಿ ಸಲ್ಲಿಸಿದ್ದರೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೫,೮೧೯-ಹೀಗೆ ಒಟ್ಟು ಭೂಮಿಗಾಗಿ ೧,೬೭,೯೫೪ ಕುಟುಂಬಗಳು ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿವೆ. ಅವುಗಳಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಹಕ್ಕು ದೊರಕಿರುವುದು ೯,೩೪೧ ಕುಟುಂಬಗಳಿಗೆ ಮಾತ್ರ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.