ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದ ಎಲ್ಲ ನಗರಗಳಲ್ಲಿ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಅಕ್ರಮ ಸಕ್ರಮಕ್ಕೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇನ್ನು 15 ದಿನಗಳಲ್ಲಿ ಸರ್ಕಾರ ಆದೇಶ ಜಾರಿಯಾಗಲಿದೆ ಎಂದು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಪ್ರಕಟಿಸಿದ್ದಾರೆ.
ಅವರು ಉಡುಪಿಯಲ್ಲಿ ಶನಿವಾರ ತಮ್ಮ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು.ಪರವಾನಗಿ ಇಲ್ಲದೇ ಕಟ್ಟಲಾಗಿರುವ ಅಕ್ರಮ ಕಟ್ಟಡಗಳಿಂದ ಸರ್ಕಾರಕ್ಕೆ ಆದಾಯ ಬರುವುದಿಲ್ಲ, ಅವುಗಳನ್ನು ಸಕ್ರಮ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ಆದಾಯ ದೊರೆಯಲಿದೆ. ಅನೇಕ ಕಡೆಗಳಲ್ಲಿ ಅಕ್ರಮ ಮನೆಗಳಿಗೆ ನೀರು, ವಿದ್ಯುತ್ ಸಂಪರ್ಕಕ್ಕೂ ತೊಂದರೆಯಾಗುತ್ತದೆ. ವಾಣಿಜ್ಯ ಕಟ್ಟಡಗಳಲ್ಲಿ ಒಂದು ಮಹಡಿಗೆ ಪರವಾನಗಿ ಪಡೆದು ಹೆಚ್ಚು ಮಹಡಿಗಳನ್ನು ಕಟ್ಟಿರುತ್ತಾರೆ. ಇಂತಹ ಅಕ್ರಮ ಕಟ್ಟಡಗಳಿಗೆ ಸಕ್ರಮಕ್ಕೆ ಅವಕಾಶ ನೀಡಲಾಗಿದೆ ಎಂದರು.
ಆದರೆ ಅಕ್ರಮಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಇದು ಒಂದು ಬಾರಿ ಮಾತ್ರ ಅವಕಾಶ, ಇನ್ನೊಮ್ಮೆ ಇಲ್ಲ. ಆದ್ದರಿಂದ ಅಧಿಕಾರಿಗಳು ಸಕ್ರಿಯವಾಗಿ ಈ ಯೋಜನೆ ಜಾರಿಗೊಳಿಸಬೇಕು ಎಂದವರು ಹೇಳಿದರು.* ಸ್ವಸಹಾಯ ಸಂಘಗಳಿಂದ ತೆರಿಗೆ
ರಾಜ್ಯದ ಬಹುತೇಕ ನಗರಾಡಳಿತ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದೆ, ಆದ್ದರಿಂದ ತೆರಿಗೆ ಸಂಗ್ರಹಕ್ಕೆ ಸ್ಥಳೀಯ ಸ್ವಸಹಾಯ ಸಂಘಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಈ ಸ್ವಸಹಾಯ ಸಂಘಗಳಿಗೆ ಸಂಗ್ರಹ ಮಾಡಿದ ತೆರಿಗೆಯಲ್ಲಿ ಶೇ.5ರಷ್ಟನ್ನು ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.* 5 ವರ್ಷ ಟ್ರೇಡ್ ಲೈಸೆನ್ಸ್
ನಗರ ಪ್ರದೇಶದ ವ್ಯಾಪಾರ ಪರವಾನಗಿಗಳನ್ನು ನೀಡುವಾಗ ಅಥವಾ ನವೀಕರಣಗೊಳಿಸುವಾಗ 5 ವರ್ಷಗಳ ಅವಧಿಗೆ ನೀಡಬೇಕು. ವರ್ಷದ ಅವಧಿಗೆ ನೀಡಿ ಪದೇಪದೆ ಜನರು ತಮ್ಮ ಬಳಿಗೆ ಬರುವಂತೆ ಮಾಡಬೇಡಿ, ವ್ಯಾಪಾರಿಗಳಿಗೆ ಅನಾವಶ್ಯಕ ತೊಂದರೆ ಕೊಡಬೇಡಿ, ಅವರಿಗೆ ಗೊತ್ತಿಲ್ಲದಿದ್ದರೆ ತಿಳಿ ಹೇಳಿ 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಣಕ್ಕೆ ಒಪ್ಪಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.* ಇಂದಿರಾ ಕ್ಯಾಂಟೀನ್ ಭೇಟಿ
ಸಭೆಗೆ ಮೊದಲು ಸಚಿವರು ಮಣಿಪಾಲದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದರು. ಅಲ್ಲಿ ದಿನಕ್ಕೆ 500 ಮಂದಿ ಊಟ ಮಾಡುತ್ತಾರೆ ಎಂದು ನಗರಸಭೆಯ ಅಧಿಕಾರಿಗಳು ಹೇಳಿದರು. ಆದರೆ ಅದಕ್ಕೆ ಲೆಕ್ಕಪತ್ರಗಳಿಲ್ಲ ಎಂದಾಗ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕ್ಯಾಂಟೀನ್‌ನೊಳಗೆ ಸಿಸಿ ಕ್ಯಾಮರಾ ಕೂಡ ಇಲ್ಲದ್ದನ್ನು ಸಚಿವರು ಪ್ರಶ್ನಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿ.ಪಂ. ಮು.ಕಾ.ಅಧಿಕಾರಿ ಪ್ರತೀಕ್ ಬಾಯಲ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ, ಆಪ್ತ ಕಾರ್ಯದರ್ಶಿ ಡಾ.ಕೆ. ಮುರುಳಿಧರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.