ಮಂಗಳೂರಿನಲ್ಲಿ ಒಂದು ಕಾಲೇಜು ವಿದ್ಯಾರ್ಥಿಗಳಿಂದ ಇನ್ನೊಂದು ಕಾಲೇಜಿವರ ಕಿಡ್ನಾಪ್‌, ಹಲ್ಲೆ!

KannadaprabhaNewsNetwork | Published : Aug 21, 2024 1:46 AM

ಸಾರಾಂಶ

ಫುಟ್ಬಾಲ್‌ ಪಂದ್ಯದ ವೇಳೆ ನಡೆದ ಸಣ್ಣ ಜಗಳವನ್ನೇ ಮುಂದಿಟ್ಟುಕೊಂಡು ಒಂದು ಕಾಲೇಜಿನ ವಿದ್ಯಾರ್ಥಿಗಳ ತಂಡ ಇನ್ನೊಂದು ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ, ಅರೆಬೆತ್ತಲೆಗೊಳಿಸಿ ವಿಡಿಯೋ ಮಾಡಿದ ಆಘಾತಕಾರಿ ಘಟನೆ ಮಂಗಳೂರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಮಂಗಳವಾರ ಇಬ್ಬರನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಫುಟ್ಬಾಲ್‌ ಪಂದ್ಯದ ವೇಳೆ ನಡೆದ ಸಣ್ಣ ಜಗಳವನ್ನೇ ಮುಂದಿಟ್ಟುಕೊಂಡು ಒಂದು ಕಾಲೇಜಿನ ವಿದ್ಯಾರ್ಥಿಗಳ ತಂಡ ಇನ್ನೊಂದು ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ, ಅರೆಬೆತ್ತಲೆಗೊಳಿಸಿ ವಿಡಿಯೋ ಮಾಡಿದ ಆಘಾತಕಾರಿ ಘಟನೆ ಮಂಗಳೂರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಮಂಗಳವಾರ ಇಬ್ಬರನ್ನು ಬಂಧಿಸಲಾಗಿದೆ.

ಹಲ್ಲೆಗೊಳಗಾದ ಮೂವರು ವಿದ್ಯಾರ್ಥಿಗಳು ಮತ್ತು ಅಪಹರಣ ಮಾಡಿದ ಐವರ ಪೈಕಿ ಇಬ್ಬರು ಅಪ್ತಾಪ್ತರು. ಉಳಿದ ಮೂವರು ಆರೋಪಿಗಳು 18-19 ವರ್ಷ ವಯಸ್ಸಿನವರು. ಇನ್ನೂ ಮೀಸೆ ಮೂಡದ ವಿದ್ಯಾರ್ಥಿಗಳು ಸಿನಿಮೀಯ ರೀತೀಯಲ್ಲಿ ಪಕ್ಕಾ ಪ್ಲ್ಯಾನ್‌ ಮಾಡಿ ರೌಡಿಗಳ ರೀತಿ ಈ ಕೃತ್ಯ ಎಸಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಫುಟ್ಬಾಲ್‌ ಪಂದ್ಯದ ಹಗೆ:

ಆ.14ರಂದು ನಗರದ ನೆಹರು ಮೈದಾನದಲ್ಲಿ ಯೆನೆಪೋಯ ಕಾಲೇಜು ಮತ್ತು ಅಲೋಶಿಯಸ್ ಕಾಲೇಜು ಫುಟ್ಬಾಲ್ ತಂಡಗಳ ನಡುವೆ ಪಂದ್ಯ ನಡೆದಿದ್ದು, ಅದರಲ್ಲಿ ಯೆನೆಪೋಯ ತಂಡ ಜಯ ಗಳಿಸಿತ್ತು. ಈ ಪಂದ್ಯದ ವೇಳೆ ನಡೆದ ಸಣ್ಣ ವಾಗ್ವಾದದ ಹಗೆ ಇಟ್ಟುಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ಸೋಮವಾರ ಸಂಜೆ ಸುಮಾರು 6.15ರ ವೇಳೆಗೆ ನಗರದ ಪಾಂಡೇಶ್ವರ ಫೋರಂ ಮಾಲ್ ಬಳಿಯಿಂದ ಮೂವರು ಅಪ್ರಾಪ್ತ ವಿದ್ಯಾರ್ಥಿಗಳನ್ನು (ಇಬ್ಬರು ಯೇನೆಪೋಯ ಕಾಲೇಜು, ಇನ್ನೊಬ್ಬ ಮಾತಾ ಸಂಸ್ಥೆ ವಿದ್ಯಾರ್ಥಿ) ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳಾದ ದಿಯಾನ್, ತಸ್ಲೀಮ್‌, ಸಲ್ಮಾನ್ ಹಾಗೂ ಇಬ್ಬರು ಅಪ್ರಾಪ್ತ ಆರೋಪಿಗಳು (ಸೈಂಟ್ ಅಲೋಶಿಯಸ್‌ ಮತ್ತು ಮಾತಾ ಕಾಲೇಜು ವಿದ್ಯಾರ್ಥಿಗಳು) ಕಾರಿನಲ್ಲಿ ಅಪಹರಿಸಿದ್ದಾರೆ. ಕಾರಿನಲ್ಲೇ ಕೈ ಮತ್ತು ಕಾಲಿನಿಂದ ಹೊಡೆದಿದ್ದಲ್ಲದೆ, ಮಹಾಕಾಳಿಪಡ್ಪು ಮತ್ತು ಜಪ್ಪು ಮಹಾಕಾಳಿ ಪಡ್ಪು ಮಸೀದಿ ಬಳಿ ಸೇರಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಮತ್ತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ವಿಡಿಯೋ ಚಿತ್ರೀಕರಣ:

ಎಲ್ಲರೂ ಸೇರಿ ಒಬ್ಬ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಮತ್ತು ಮೂವರೂ ವಿದ್ಯಾರ್ಥಿಗಳ ಶರ್ಟ್‌ ಪ್ಯಾಂಟ್‌ ಬಿಚ್ಚಿಸಿ ಬಸ್ಕಿ ಹೊಡೆಸಿದ ವಿಡಿಯೋ ಮಾಡಿ ಅದನ್ನು ವಾಟ್ಸಪ್‌ ಮೂಲಕವೂ ಆರೋಪಿಗಳು ಹಂಚಿಕೊಂಡಿದ್ದಾರೆ.

ಸಾಕಷ್ಟು ಹಲ್ಲೆ ಬಳಿಕ ಸಂತ್ರಸ್ತರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article