ಕನ್ನಡಪ್ರಭವಾರ್ತೆ ತಿಪಟೂರು
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಎಚ್‌ಪಿವಿ ವಿಶೇಷ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈಗಾಗಲೇ ತಿಪಟೂರು ತಾಲೂಕು ಎಚ್‌ಪಿವಿ ನೀಡುವುದರಲ್ಲಿ ಶೇ.೮೧ರಷ್ಟು ಪ್ರಗತಿ ಸಾದಿಸಿದ್ದು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಇದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್ ಹಾಗೂ ಆರೋಗ್ಯ ಇಲಾಖೆಯ ಶ್ರಮವಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು.ನಾನು ಮೊದಲಿನಿಂದಲೂ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದೇನೆ. ಈಗ ವಿದ್ಯುತ್ ಮತ್ತು ನೀರಾವರಿಗೂ ಆದ್ಯತೆ ನೀಡಿದ್ದು ತಾಲೂಕಿನ ಸರ್ವತೋಮುಖ ಪ್ರಗತಿಗೆ ಪಣತೊಟ್ಟಿದ್ದೇನೆ. ತಾಲ್ಲೂಕಿನ ಹನ್ನೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪೋಷಕರು ತಮ್ಮ ೧೪-೧೫ ವರ್ಷದ ಹೆಣ್ಣುಮಕ್ಕಳಿಗೆ ಲಸಿಕೆ ಹಾಕಿಸಿ ಮಕ್ಕಳಿಗೆ ಮುಂದೆ ಬರುಬಹುದಾದ ತೊಂದರೆಯಿಂದ ತಪ್ಪಿಸಿ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ಚನ್ನಕೇಶವ ಮಾತನಾಡಿ ೧೪ರಿಂದ ೧೫ವರ್ಷ ವಯೋಮಾನದ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ ಲಸಿಕೆಯನ್ನು ಹಾಕಲಾಗುತ್ತಿದೆ. ಈ ಲಸಿಕೆ ಹಾಕಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಗರ್ಭಕೋಶ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ದೇಶದಲ್ಲಿ ಅದರಲ್ಲಿಯೂ ಹೆಣ್ಣುಮಕ್ಕಳಲ್ಲಿ ಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕೋಶ ಕ್ಯಾನ್ಸರ್ ಪ್ರಮುಖವಾಗಿದ್ದು ಇದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ೧೪ವರ್ಷ ತುಂಬಿದ ಎಲ್ಲ ಹೆಣ್ಣಮಕ್ಕಳೂ ಈ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್ ಮಾತನಾಡಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ತಾಲೂಕು ಆಡಳಿತ ವಿಶೇಷ ಕ್ರಮಗಳನ್ನು ಕೈಗೊಂಡಿದ್ದು ಎಲ್ಲ ಶಾಲೆಗಳ ಶಿಕ್ಷಕರನ್ನು ಕರೆಸಿ ಸಭೆ ಮಾಡಿ ಪ್ರೌಢಶಾಲಾ ಮಕ್ಕಳಿಗೆ ಶಾಲೆಯಲ್ಲಿಯೇ ಸಲಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಶಾಲೆಬಿಟ್ಟ ಮಕ್ಕಳನ್ನೂ ಗುರುತಿಸಿ ಅವರಿಗೂ ಲಸಿಕೆ ಹಾಕಲಾಗುತ್ತದೆ. ಆರು ತಿಂಗಳ ಅಂತರದಲ್ಲಿ ಎರಡು ಬಾರಿ ಈ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಈ ವಿಶೇಷ ಲಸಿಕಾ ಅಭಿಯಾನ ಮಾಡುವ ಮೂಲಕ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಇದೇ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಹಾಕಿಸಿಕೊಂಡರೆ ಒಂದು ಲಸಿಕೆಗೆ ೪-೫ ಸಾವಿರ ನೀಡಬೇಕಾಗುತ್ತದೆ. ಸರ್ಕಾರ ಲಸಿಕಾ ಅಭಿಯಾನದ ಮೂಲಕ ಉಚಿತವಾಗಿ ಲಸಿಕೆ ನೀಡುತ್ತಿದ್ದು ಎಲ್ಲ ಮಕ್ಕಳೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.