ಭದ್ರಾ ಮೇಲ್ದಂಡೆ ಕಚೇರಿ ಕಾಯೋಕೆ ನೂರೆಂಟು ಮಂದಿ

KannadaprabhaNewsNetwork |  
Published : Mar 14, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕಚೇರಿ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಚೇರಿಗೆ ಬರ್ತಾರೆ, ಅಟೆಂಡೆನ್ಸ್ ಗೆ ಸಹಿ ಹಾಕ್ತಾರೆ. ಹಾಗೆ ಒಂದೆರೆಡು ಬಾರಿ ಚಹ ಹೀರಿ ಹರಟೆ ಹೊಡೆದು ವಾಪಾಸ್ಸಾಗ್ತಾರೆ. ವಾಟ್ಸಾಪ್ ಚಾಟಿಂಗ್ ಮಾಡ್ತಾ, ರೀಲ್ತ್ ನೋಡ್ತ ಹೇಗೋ ಎಂಟು ತಾಸು ಕಾಲ ಕಳಿತಾರೆ. ಒಂದರ್ಥದಲ್ಲಿ ಕಚೇರಿ ಕಾಯುವ ವಾಚ್ ಮನ್ ಕೆಲಸ ಇವರದು. ಫೈಲ್ಸ್ ನೋಡಂಗಿಲ್ಲ, ಫೀಲ್ಡ್ ವಿಜಿಟ್ ಮಾಡಬೇಕು ಎಂಬ ಉಸಾಬರಿಗಳೇ ಇಲ್ಲ.

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಕಚೇರಿಯ ದೃಶ್ಯವಿದು. 21 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾಡಲು ಕೆಲಸವೇ ಇಲ್ಲ. ಅನುದಾನ ಬಾರದೆ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಕೆಲಸ ಸ್ಥಗಿತವಾಗಿರುವುದರಿಂದ ಕಾಮಗಾರಿ ಪರಿಶೀಲನೆ ನಡೆಸಲು ಅಧಿಕಾರಿಗಳು ಹೋಗದಂತಾಗಿದೆ. ವಾಹನಗಳ ಡೀಸೆಲ್ ಗೂ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾ್ಣವಾಗಿದೆ. ಸದ್ಯ ಸಂಬಳ ಬರುತ್ತಿದೆ ಎಂಬುದೇ ನೌಕರರಿಗೆ ಸಮಾಧಾನಕರ ಸಂಗತಿ.

ಭದ್ರಾ ಮೇಲ್ದಂಡೆಯ ಬಿಆರ್‌ಪಿ ಹಾಗೂ ಚಿತ್ರದುರ್ಗ ಡಿವಿಜನ್ ಸೇರಿ 628 ಮಂಜೂರಾದ ಹುದ್ದೆಗಳಿದ್ದರೆ 407 ಹುದ್ದೆ ಖಾಲಿ ಇವೆ. 221 ಮಂದಿ ರೆಗ್ಯುಲರ್ ಹಾಗೂ 205 ಮಂದಿ ಹೊರಗುತ್ತಿಗೆ ನೌಕರರು ಸೇರಿದಂತೆ ಹಾಲಿ 426 ಮಂದಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ ತಿಂಗಳ ಈ ವೇಳೆ ಎಲ್ಲ ಕಚೇರಿಯಲ್ಲಿ ಉದ್ಯೋಗಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೊಟ್ಟಿರುವ ಟಾರ್ಗೆಟ್ ಮುಗಿಸಲು ಯತ್ನಿಸುತ್ತಿದ್ದಾರೆ. ಆದರೆ ಭದ್ರಾ ಮೇಲ್ದಂಡೆ ಕಚೇರಿಯದು ಬೇರೆಯದೇ ಕತೆ ಇದೆ. ಅನುದಾನ ಇಲ್ಲದ ಕಾರಣ ಫೈಲ್ ಗಳು ಮಾತಾಡುತ್ತಿಲ್ಲ, ಗುರಿಗಳು ದಿಕ್ಕು ತಪ್ಪಿವೆ.

ಭದ್ರಾ ಮೇಲ್ದಂಡೆ ಯೋಜನೆಯಡಿ ಎರಡೂ ಡಿವಿಜನ್ ಸೇರಿ ಫೆಬ್ರವರಿ ಅಂತ್ಯಕ್ಕೆ ಒಟ್ಟಾರೆ 2955 ಕೋಟಿ ರೂಪಾಯಿ ಬಾಕಿ ಬಿಲ್ಲುಗಳಿವೆ. ಸರ್ಕಾರ ಸಂಬಳ ಬಿಟ್ಟರೆ ಇತರೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಬಾಕಿ ಬಿಲ್ಲುಗಳ ಭಾರ ತಾಳಲಾರದೆ ಇಡೀ ಇಲಾಖೆ ಕಂಪಿಸುತ್ತಿದೆ. ಗುತ್ತಿಗೆದಾರರು ಇಲಾಖೆಯ ಉಸಾಬರಿಯೇ ಬೇಡವೆಂಬ ತೀರ್ಮಾನಕ್ಕೆ ಬಂದಂತಿದ್ದು ಈಗಾಗಲೇ ಮಾಡಿರುವ ಕಾಮಗಾರಿ ಬಿಲ್ಲು ಪಡೆಯಲು ನ್ಯಾಯಾಲಯದ ಕಟೆಕಟೆ ಹತ್ತುವ ನಿಟ್ಟಿನಲ್ಲಿ ಆಲೋಚನೆಗಳ ನಡೆಸಿದ್ದಾರೆ.

ಭದ್ರಾ ಮೇಲ್ಡಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ಹಾಗೂ ರಾಜ್ಯ ಸರ್ಕಾರ ಕನಿಷ್ಟ 5 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲೆಯ ಜನತೆ ಒತ್ತಾಯಿಸಿದ್ದರೂ ಉಭಯ ಸರ್ಕಾರಗಳ ಕಿವಿಗೆ ಹೋಗಿಲ್ಲ. ಕೇಂದ್ರ ಸರ್ಕಾರ ಘೋಷಿಸಿದ ಅನುದಾನ ಮೊದಲು ಕೊಡಲಿ ಎಂದು ರಾಜ್ಯ ಹಾಗೂ ಕೇಂದ್ರ ಅನುದಾನ ನೀಡುತ್ತದೆ ಎಂಬ ಕಾರಣಕ್ಕೆ ಯೋಜನೆ ಆರಂಭಿಸಿರಲ್ಲವೆಂದು ಕೇಂದ್ರ ಜಟಾಪಟಿಗಿಳಿದಿವೆ. ಕನಿಷ್ಠ ಕಾಳಜಿಗಳು ಗೋಚರವಾಗುತ್ತಿಲ್ಲ.

ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಯಲು ನಿರ್ಮಿಸಲಾದ ಕಾಲುವೆಗಳು ಬಿಸಿಲಿನ ಝಳಕ್ಕೆ ಬಿರುಕು ಬಿಡುತ್ತಿವೆ. ಅನುದಾನ ಬಿಡುಗಡೆ ವಿಳಂಬವಾದಷ್ಟೂ ಕಾಮಗಾರಿಗಳು ಅಡ್ಡ ಪರಿಣಾಮ ಬೀರುತ್ತವೆ. ಹೊಳಲ್ಕೆರೆ ತಾಲೂಕಿನ ಕೆರೆಗಳ ತುಂಬಿಸಿ ಗೋನೂರುವರೆಗೆ ನೀರು ಹಾಯಿಸಲು ಕನಿಷ್ಟ 300 ಕೋಟಿ ರೂಪಾಯಿ ಅನುದಾನ ನೀಡುವಂತೆ ಜಿಲ್ಲೆಯ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಮುಂದೆ ಮಂಡಿಯೂರಿದ್ದರೂ ಫಲ ನೀಡಿಲ್ಲ. ಸಿದ್ದರಾಮಯ್ಯ ಇತ್ತೀಚೆಗೆ ಮಂಡಿಸಿದ ಬಜೆಟ್ ನಲ್ಲೂ ಭದ್ರಾ ಮೇಲ್ದಂಡೆಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಕಾಮಗಾರಿ ನೆನೆಗುದಿಗೆ ಬೀಳುವ ಎಲ್ಲ ಅಪಾಯಗಳು ಗೋಚರಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಡಾ.ಕೆ.ಸುಧಾಕರ್‌
ಗೃಹ ಬಳಕೆ ಸಿಲಿಂಡರ್‌ ಅಕ್ರಮ