ಹುಬ್ಬಳ್ಳಿ: ಗುಡುಗು ಸಹಿತ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಮೂವರು ಕುರಿಗಾಹಿಗಳು ಮತ್ತು 100 ಕುರಿಗಳು ಸಿಲುಕಿದ್ದವು. ತಕ್ಷಣ ಕಾರ್ಯಾಚರಣೆಗಿಳಿದ ತಾಲೂಕು ಆಡಳಿತ ಕುರಿಗಳು ಹಾಗೂ ಕುರಿಗಾಹಿಗಳನ್ನು ರಕ್ಷಣೆ ಮಾಡಿದ್ದು, ಈ ವೇಳೆ ಎರಡು ಕುರಿಗಳು ಹಳ್ಳದಲ್ಲಿ ಮೃತಪಟ್ಟಿರ ಬಗ್ಗೆ ಪ್ರಾಥಮಿಕ ವರದಿಯಾಗಿದೆ.
ಮಳೆ ನೀರಲ್ಲಿ ಕೊಚ್ಚಿಹೋದ ಬೈಕ್ ಸವಾರ
ಹುಬ್ಬಳ್ಳಿ: ಇಲ್ಲಿನ ನೇಕಾರ ನಗರದಲ್ಲಿ ಮಳೆಯಲ್ಲೇ ತೆರಳುತ್ತಿದ್ದ ಬೈಕ್ ಸವಾರ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಹುಸೇನ್ ಕಳಸ (55) ಚರಂಡಿಯಲ್ಲಿ ಕೊಚ್ಚಿಕೊಂಡು ಹೋದವ.ಹುಸೇನ ಮತ್ತು ಇನ್ನೊಬ್ಬ ಬೈಕ್‌ನಲ್ಲಿ ನೇಕಾರನಗರದ ಸೇತುವೆ ಬಳಿ ತೆರಳುತ್ತಿದ್ದರು. ಈ ವೇಳೆ ಮಳೆ ನೀರು ಹರಿಯುತ್ತಿತ್ತು. ಇದರಲ್ಲೆ ಕೆಲವರು ದಾಟಿ ಮುಂದೆ ಸಾಗಿದ್ದಾರೆ. ಇದನ್ನು ನೋಡಿದ ಹುಸೇನ್ ಸಹ ಬೈಕ್ ದಾಟಿಸಲು ಪ್ರಯತ್ನಿಸಿದ್ದು, ಈ ವೇಳೆ ಆಯತಪ್ಪಿ ಬಿದ್ದು, ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಹಿಂಬದಿ ಸವಾರ ಹೊರಗಡೆ ಬಿದ್ದಿದ್ದರಿಂದ ಬಚಾವ್ ಆಗಿದ್ದಾನೆ.ಕೊಚ್ಚಿಕೊಂಡು ಹೋದ ಹುಸೇನ್‌ಗಾಗಿ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೂ ಪತ್ತೆಯಾಗಿಲ್ಲ. ತಹಸೀಲ್ದಾರ್ ಸ್ಥಳಕ್ಕೆ ಭೇಟಿ ಕಾರ್ಯಾಚರಣೆ ಪರಿಶೀಲಿಸಿದರು.