ಇಷ್ಟಲಿಂಗಕ್ಕೆ ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸಬೇಕು: ಸಾಣೇಹಳ್ಳಿ ಶ್ರೀ

KannadaprabhaNewsNetwork |  
Published : Oct 04, 2026, 01:45 AM IST
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಗಣ್ಯರು, ಸಾಣೆಹಳ್ಳಿ ಶ್ರೀಗಳು, ಪಾಂಡೋಮಟ್ಟಿ ಶ್ರೀಗಳು ಇದ್ದಾರೆ | Kannada Prabha

ಸಾರಾಂಶ

ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದರೂ ನಮ್ಮಲ್ಲಿ ಜಾತಿ ವ್ಯವಸ್ಥೆ ಎಂಬುದೇ ಹೋಗುತ್ತಿಲ್ಲ. ರಾಜ್ಯದಲ್ಲಿ ಲಿಂಗಾಯಿತ ಸ್ವತಂತ್ರ ಧರ್ಮ ಮಾಡಬೇಕು ಎಂಬ ಜಾಗೃತಿ ನಡೆಯುತ್ತಿದೆ. ಸರ್ಕಾರಗಳು ಮಾನ್ಯತೆ ನೀಡಿದರೆ ಮಾತ್ರವೇ ಧರ್ಮವಾಗುವುದಿಲ್ಲ, ಇದು 12ನೇ ಶತಮಾನದಲ್ಲಿಯೇ ಹುಟ್ಟಿದ ಧರ್ಮವಾಗಿದೆ ಎಂದು ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಲಿಂಗಾಯತ ಧರ್ಮೀಯರ ಸಮಾವೇಶ । ಹಿರಿಯ ನಾಗರಿಕರಿಗೆ ಗೌರವ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದರೂ ನಮ್ಮಲ್ಲಿ ಜಾತಿ ವ್ಯವಸ್ಥೆ ಎಂಬುದೇ ಹೋಗುತ್ತಿಲ್ಲ. ರಾಜ್ಯದಲ್ಲಿ ಲಿಂಗಾಯಿತ ಸ್ವತಂತ್ರ ಧರ್ಮ ಮಾಡಬೇಕು ಎಂಬ ಜಾಗೃತಿ ನಡೆಯುತ್ತಿದೆ. ಸರ್ಕಾರಗಳು ಮಾನ್ಯತೆ ನೀಡಿದರೆ ಮಾತ್ರವೇ ಧರ್ಮವಾಗುವುದಿಲ್ಲ, ಇದು 12ನೇ ಶತಮಾನದಲ್ಲಿಯೇ ಹುಟ್ಟಿದ ಧರ್ಮವಾಗಿದೆ ಎಂದು ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಶನಿವಾರ ಪಟ್ಟಣದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಸಾಧು ಲಿಂಗಾಯತ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮೀಯರ ಸಮಾವೇಶ ಹಾಗೂ ಸಮಾಜದ ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಹುಟ್ಟಿದ್ದಾಗಿದೆ. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರಗಳನ್ನು ಯಾರು ಮೈಗೂಡಿಸಿಕೊಂಡು ನಡೆಯುತ್ತಾರೋ ಅಂತಹವರು ಲಿಂಗಾಯತರಾಗಲು ಸಾಧ್ಯ. ಕೊರಳಲ್ಲಿ ಲಿಂಗಧಾರಣೆ ಮಾಡಿದವರು ಏಕದೇವೋಪಾಸಕರಾಗಿ ಬೇರೆ ದೇವರುಗಳನ್ನು ನೋಡಲು ಗುಡಿ-ಗುಂಡಾರಗಳಿಗೆ ತಿರುಗುವ ಅವಶ್ಯಕತೆ ಇಲ್ಲ. ನಿಮ್ಮ ಕೊರಳಿನಲ್ಲಿರುವ ಇಷ್ಟಲಿಂಗಕ್ಕೆ ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸಬೇಕು ಎಂದರು.

ಪಾಂಡೋಮಟ್ಟಿ ವಿರಕ್ತ ಮಠದ ಡಾ. ಶ್ರೀ ಗುರುಬಸವ ಮಹಾಸ್ವಾಮಿಗಳು ಮಾತನಾಡಿ, ಲಿಂಗದ ಮಹತ್ವದ ಬಗ್ಗೆ ತಿಳಿಸುತ್ತಾ, ಭಕ್ತರು ಕೊರಳಲ್ಲಿ ಲಿಂಗ ಧರಿಸುವಂತೆ ಮಾಡಬೇಕಾದ್ದು ಮಠಾಧಿಪತಿಗಳ ಕೆಲಸವಾಗಿದೆ. ಚನ್ನಗಿರಿ ನಗರದ ಲಿಂಗಾಯತ ಧರ್ಮದ ಪ್ರಮುಖರು ನಗರದಲ್ಲಿರುವ ತಮ್ಮ ಧರ್ಮದವರನ್ನು ಸಂಘಟಿಸಿ ಧರ್ಮ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಲಿಂಗಾಯತ ಧರ್ಮದಲ್ಲಿ ಹುಟ್ಟಿ ತಮ್ಮ ಮನೆಯ ಗೃಹಪ್ರವೇಶದ ಸಂದರ್ಭಗಳಲ್ಲಿ, ಮದುವೆಯ ಸಂದರ್ಭಗಳಲ್ಲಿ ವೈದಿಕ ಧರ್ಮವನ್ನು ಆಚರಣೆ ಮಾಡುವುದನ್ನು ನಿಲ್ಲಿಸಬೇಕು. ಬಸವಣ್ಣನವರ ತತ್ವ- ಲಿಂಗಾಯತ ಜಾತಿ ಅಲ್ಲ, ಲಿಂಗಾಯಿತ ಧರ್ಮವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಾಧು ಲಿಂಗಾಯತ ಸಮಾಜದ ನಗರ ಘಟಕದ ಅಧ್ಯಕ್ಷ ಬೇಕರಿ ಶಿವಲಿಂಗಪ್ಪ ವಹಿಸಿದ್ದರು. ಇದೇ ಸಂದರ್ಭದಲ್ಲಿ 75 ವರ್ಷ ತುಂಬಿದ ಸಮಾಜದ ಹಿರಿಯ ನಾಗರೀಕರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜೀವ ವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ತುಮ್ ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಮಾಜಿ ಅಧ್ಯಕ್ಷ ಆರ್.ಎಂ.ರವಿ, ತಾಲೂಕು ಶ.ಸಾ.ಪ. ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ, ಚಂದ್ರಪ್ಪ, ಹಲಕನಾಳ್ ಪ್ರಕಾಶ್, ವಿಜಯ್ ಗೌಡ್ರು ಸೇರಿದಂತೆ ಸಮಾಜದ ಪ್ರಮುಖರು ಹಾಜರಿದ್ದರು.

- - -

(ಬಾಕ್ಸ್‌)

* ರಾಜಕೀಯ ಸಾಧನೆಗೆ ಮುಂದಾಗಿ: ವಿರೂಪಾಕ್ಷಪ್ಪ

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಈ ಹಿಂದೆ ಚನ್ನಗಿರಿ ಪಟ್ಟಣದಲ್ಲಿ ಸಾಧು ಲಿಂಗಾಯತ ಸಮಾಜದವರ 7 ಕುಟುಂಬಗಳು ಮಾತ್ರ ಚನ್ನಗಿರಿ ನಗರದಲ್ಲಿ ವಾಸಿಸುತ್ತಿದ್ದರು. ಆರ್ಥಿಕವಾಗಿ ಸಬಲರಾದ ಮೇಲೆ ಗ್ರಾಮಾಂತರ ಪ್ರದೇಶದಲ್ಲಿರುವ ಸಮಾಜ ಬಾಂಧವರು ಪಟ್ಟಣಕ್ಕೆ ಬಂದು ನೆಲೆಸಿ ಈಗ 320 ಕುಟುಂಬಗಳು ಆಗಿವೆ. 250 ಕುಟುಂಬಗಳು ಸ್ವಂತ ಮನೆಗಳನ್ನು ನಿರ್ಮಿಸಿಕೊಂಡು ಪಟ್ಟಣದಲ್ಲಿಯೇ ನೆಲೆಸಿರುವುದು ಸಮಾಜದ ಪ್ರಗತಿಯನ್ನು ತೋರಿಸುತ್ತದೆ. ಸಮಾಜದಲ್ಲಿ ಸಾಧನೆ ಮಾಡಲು ಅಧಿಕಾರ ಬೇಕು. ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಅನ್ಯ ಸಮಾಜದವರ ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಂಡು ರಾಜಕೀಯ ಕ್ಷೇತ್ರದಲ್ಲೂ ಸಾಧನೆಗೆ ಮುಂದಾಗಬೇಕು ಎಂದರು.

- - -

-3ಕೆಸಿಎನ್ಜಿ1: ಸಮಾರಂಭವನ್ನು ಸಾಣೆಹಳ್ಳಿ ಶ್ರೀಗಳು, ಪಾಂಡೋಮಟ್ಟಿ ಶ್ರೀಗಳು ಮತ್ತಿತರ ಗಣ್ಯರು ಉದ್ಘಾಟಿಸಿದರು.

-3ಕೆಸಿಎನ್ಜಿ2: ಕಾರ್ಯಕ್ರಮದಲ್ಲಿ 75 ವರ್ಷ ತುಂಬಿದ ಸಮಾಜದ ಹಿರಿಯ ನಾಗರೀಕರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಎಕರೆಗೆ ₹25000 ಪರಿಹಾರ ನೀಡಲಿ
ಯುವ ಸಮೂಹಕ್ಕೆ ಉತ್ತಮ ಸಂದೇಶಗಳು ಅಗತ್ಯ