ರಸ್ತೆಯ ಒಂದುಬದಿ ತೆರವು, ಸಂಚಾರಕ್ಕಿಲ್ಲ ಅನುಮತಿ

KannadaprabhaNewsNetwork |  
Published : Jul 20, 2024, 12:55 AM IST
ಶಿರೂರು ಗುಡ್ಡ ಕುಸಿತದ ತೆರವು ಕಾರ್ಯ ನಡೆಯಿತು. | Kannada Prabha

ಸಾರಾಂಶ

ಅಂಕೋಲಾ ಸಮೀಪದ ಗುಡ್ಡ ಬಿದ್ದ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರಸ್ತುತ ಬಿದ್ದಿರುವ ಮಣ್ಣನ್ನು ಸಂಪೂರ್ಣ ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಲಾಗುತ್ತಿದೆ.

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಒಂದು ಬದಿಯ ಮಣ್ಣು ತೆರವು ಕಾರ್ಯಾಚರಣೆ ಮುಗಿದಿದ್ದು, ಆದರೆ ವಾಹನ ಸಂಚಾರಕ್ಕೆ ಅನುಮತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಶುಕ್ರವಾರ ಅಂಕೋಲಾ ಸಮೀಪದ ಗುಡ್ಡ ಬಿದ್ದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ, ಹೆದ್ದಾರಿಯ ನದಿದಂಡೆಯ ಭಾಗದಿಂದ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೊ ಬೇಡವೊ ಎನ್ನುವ ಬಗ್ಗೆ, ತಜ್ಞರಿಂದ ವರದಿ ತರಿಸಿಕೊಂಡು ಕಾರವಾರದಲ್ಲಿ ಶನಿವಾರ ವಿಶೇಷ ಸಭೆ ನಡೆಸಿದ ಮೇಲೆಯೆ ತೀಮಾನ ಕೈಗೊಳ್ಳಲಾಗುವುದು ಎಂದರು.

ಅಂಕೋಲಾ ಸಮೀಪದ ಗುಡ್ಡ ಬಿದ್ದ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರಸ್ತುತ ಬಿದ್ದಿರುವ ಮಣ್ಣನ್ನು ಸಂಪೂರ್ಣ ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದರು.

ಸಗಡೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್‌ನಲ್ಲಿನದ್ದ ಸುಮಾರು 16 ಟನ್ ಗ್ಯಾಸ್‌ನ್ನು ಎಚ್‌ಪಿಸಿಎಲ್, ಬಿಪಿಸಿಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದ್ದು, ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಮಾತನಾಡಿ, ಗುಡ್ಡ ಕುಸಿತ ಪ್ರದೇಶದಲ್ಲಿ ಇದುವರೆಗೆ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬೆಂಜ್ ಲಾರಿ ಮತ್ತು ಚಾಲಕ ಸಿಲುಕಿರುವ ಸಾಧ್ಯತೆಯಿದ್ದು, ಈ ಬಗ್ಗೆ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದ ಮೂಲಕ ಮೆಟಲ್ ಡಿಕ್ಟೇಟರ್ ಮೂಲಕ ವಾಹನದ ತಪಾಸಣೆ ಕೈಗೊಳ್ಳಲಾಗಿದೆ ಎಂದರು.

ನೇವಿ ಅಧಿಕಾರಿಗಳು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಮೀಪದ ನದಿಯಲ್ಲಿ ತಪಾಸಣೆ ನಡೆಸಿದ್ದಾರೆ ಎಂದರು.ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸುರಕ್ಷಿತ ಕಾರ್ಯಾಚರಣೆಗೆ ಅಗತ್ಯ ಸೂಚನೆಗಳನ್ನು ನೀಡಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನಾ ಮತ್ತು ವಿವಿಧ ಅಧಿಕಾರಿಗಳು ಇದ್ದರು. ತೇಲಿಬಂದ ಮಗುವಿನ ಕೈ: ಶುಕ್ರವಾರ ಸಂಜೆಯ ವೇಳೆ ಕೆಳಗಿನ ಮಂಜಗುಣಿ ಸಮುದ್ರ ಸಂಗಮ ಪ್ರದೇಶದಲ್ಲಿ ಮಗುವಿನ ಕೈ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುಧವಾರದಂದು 6 ವರ್ಷದ ಬಾಲಕ ರೋಷನ ನಾಯ್ಕ ಅವರ ಮೃತದೇಹವು ಕೈ ಇಲ್ಲದೆ ಇದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಗ ಮಂಜುಗುಣಿಯಲ್ಲಿ ಸಿಕ್ಕ ಕೈ ರೋಷನ್‌ ಅವರದು ಇರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಆದರೆ ಈ ಕೈ ಯಾರದೆಂಬ ಬಗ್ಗೆ ನಿಖರತೆಗಾಗಿ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲು ಅಂಕೋಲಾ ಪೊಲೀಸರು ಮುಂದಾಗಿದ್ದು, ಕೈಯನ್ನು ತೆಗೆದುಕೊಂಡು ಬಂದು ಮಂಗಳೂರಿಗೆ ಕಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

ಕೊಡುಗೆ ನೀಡಿದ ಪತ್ರಕರ್ತರು: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಶಿರೂರಿನ ಗುಡ್ಡ ಕುಸಿತ ಮಣ್ಣು ತೆರವು ಹಾಗೂ ಗ್ಯಾಸ್ ಟ್ಯಾಂಕರ್ ಖಾಲಿ ಮಾಡುವ ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿಗಳಿಂದ ಅಂಕೋಲಾದ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಲ್ಪೋಪಹಾರ ಹಾಗೂ ನೀರನ್ನು ನೀಡಿ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಗೌರವಾಧ್ಯಕ್ಷ ರಾಘು ಕಾಕರಮಠ. ಕಾರ್ಯದರ್ಶಿ ವಿದ್ಯಾಧರ ಮೊರಬಾ, ಪತ್ರಕರ್ತರಾದ ನಾಗರಾಜ್ ಮಂಜಗುಣಿ, ದಿನಕರ ನಾಯ್ಕ, ಮಂಜುನಾಥ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ