ದೊಡ್ಡಬಳ್ಳಾಪುರ: ಏಕಮುಖ ಚಿಂತನೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಮಾತು ಮತ್ತು ಕ್ರಿಯೆಯ ನಡುವೆ ಬೆಸುಗೆ ಇಲ್ಲವಾದರೆ ಕಾಯಕ ವ್ಯರ್ಥವಾಗುತ್ತದೆ ಎಂದು ಲೇಖಕ ಮಂಜುನಾಥ ಅದ್ದೆ ಅಭಿಪ್ರಾಯಪಟ್ಟರು.
ಭಾಷೆಯೇ ಮನುಷ್ಯನ ಸರ್ವಸ್ವ ಅಲ್ಲ. ಮನುಷ್ಯ ಸಂವೇದನೆಯ ವಿವಿಧ ಪದರಗಳಲ್ಲಿ ಭಾಷೆಯೂ ಒಂದು. ದೂರದೃಷ್ಟಿ ಇಲ್ಲದಿದ್ದರೆ ಸಮಾಜದ ಮುನ್ನಡೆ ಅಸಾಧ್ಯ. ಭಾವನಾತ್ಮಕ ವಿಚಾರಗಳ ಜೊತೆಗೆ ವಿವೇಕವಂತಿಕೆಯೂ ಅಗತ್ಯ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಪರಂಪರೆ ಜೊತೆಗೆ ಆಧುನಿಕತೆ ಬೆರೆಯಲಿ:ಸ್ಪೂರ್ತಿ ಫೌಂಡೇಶನ್‌ನ ಸುಧೀಂದ್ರ ವಸ್ತಾರೆ ಮಾತನಾಡಿ, ಮಕ್ಕಳ ವಿಚಾರ ಲಹರಿಯನ್ನು ಪ್ರಭಾವಿಸುವ ಸಾಹಿತ್ಯ ಕನ್ನಡದಲ್ಲಿ ವಿಫುಲವಾಗಿದೆ. ದೇಶ, ಭಾಷೆ, ಅಭಿಮಾನ ಇತ್ಯಾದಿಯ ಜೊತೆಗೆ ನಿತ್ಯದ ಆಗುಹೋಗುಗಳ ಜ್ಞಾನವನ್ನು ಸಾಹಿತ್ಯ ನೀಡಬೇಕು. ಮಕ್ಕಳ ಅಭಿರುಚಿಯನ್ನು ಪ್ರಭಾವಿಸುವ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ದೊರೆಯುತ್ತದೆ. ಕನ್ನಡದ ಮಕ್ಕಳು ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದು, ಪಾರಂಪರಿಕ ಜ್ಞಾನದ ಜೊತೆಗೆ ಆಧುನಿಕ ಚಿಂತನೆ ಅಗತ್ಯ ಎಂದರು.
ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯಲ್ಲಿ ಸುಧೀಂದ್ರ ವಸ್ತಾರೆ, ಬಾಲನಟಿ ಭೈರವಿ ಮತ್ತಿತರರಿದ್ದರು.