‘ಒನ್‌ ಸ್ಟೇಟ್‌ ಒನ್‌ ಜಿಪಿಎಸ್‌’ ಆದೇಶವಾಗಿ ವರ್ಷವಾದ್ರೂ ಜಾರಿ ಇಲ್ಲ: ಆರೋಪ

KannadaprabhaNewsNetwork | Published : Oct 20, 2024 1:51 AM

ಸಾರಾಂಶ

ರಾಜ್ಯದಲ್ಲಿ ಮುಖ್ಯ ಮತ್ತು ಉಪ ಖನಿಜಗಳ ಸಾಗಾಣಿಕೆಗೆ ಬಳಸುವ ವಾಹನಗಳ ಮೇಲೆ ನಿಗಾವಹಿಸಲು ‘ಒನ್ ಸ್ಟೇಟ್ ಒನ್ ಜಿಪಿಎಸ್’ ಅನುಷ್ಠಾನಕ್ಕೆ ತರಲು ಗುಂಡ್ಲುಪೇಟೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಂಪೂರ್ಣ ವಿಫಲವಾಗಿದೆ.

೨೦೨೩ರ ಜು.೧೦ರಂದು ಗಣಿ ನಿರ್ದೇಶಕರಿಂದ ನಿರ್ದೇಶನ । ಅನುಷ್ಠಾನಕ್ಕೆ ಜಿಲ್ಲಾ ಗಣಿ, ಭೂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರಾಜ್ಯದಲ್ಲಿ ಮುಖ್ಯ ಮತ್ತು ಉಪ ಖನಿಜಗಳ ಸಾಗಾಣಿಕೆಗೆ ಬಳಸುವ ವಾಹನಗಳ ಮೇಲೆ ನಿಗಾವಹಿಸಲು ‘ಒನ್ ಸ್ಟೇಟ್ ಒನ್ ಜಿಪಿಎಸ್’ ಅನುಷ್ಠಾನಕ್ಕೆ ತರಲು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಂಪೂರ್ಣ ವಿಫಲವಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಕ್ವಾರಿ ಹಾಗೂ ಕ್ರಷರ್ ಮಾಲೀಕರ ಒತ್ತಡಕ್ಕೆ ಮಣಿದು ‘ಒನ್ ಸ್ಟೇಟ್ ಒನ್ ಜಿಪಿಎಸ್’ ಅಳವಡಿಸಲು ಆಗಿಲ್ಲ. ಮೊದಲಿಗೆ ಕಾಟಾಚಾರಕ್ಕೆ ಕೆಲ ಟಿಪ್ಪರ್‌ಗಳ ಮಾಲೀಕರು ಜಿಪಿಎಸ್ ಅಳವಡಿಸಿಕೊಂಡಿದ್ದಾರೆ.

ಆದರೆ ಬಹುತೇಕ ಟಿಪ್ಪರ್‌ಗಳ ಮಾಲೀಕರು ಜಿಪಿಎಸ್‌ ಅಳವಡಿಸಿಕೊಂಡಿಲ್ಲ. ಕೆಲವರು ಅಳವಡಿಸಿಕೊಂಡಿದ್ದಾರೆ. ಇನ್ನೂ ಕೆಲವರು ಸ್ಟೇ ತಂದ ಕ್ರಷರ್‌ ಹಾಗೂ ಕ್ವಾರಿಯಿಂದ ಉಪ ಖನಿಜಗಳನ್ನು ಜಿಪಿಎಸ್‌ ಇಲ್ಲದೆ ಸಾಗಿಸುತ್ತಿದ್ದಾರೆ. ಸ್ಟೇ ತಂದವರಿಗೆ ಹೆಚ್ಚಿನ ಲಾಭವಾಗುತ್ತಿದೆ ಎನ್ನಲಾಗಿದೆ.

ಏನಿದು ಜಿಪಿಎಸ್:

ಮುಖ್ಯ ಮತ್ತು ಉಪ ಖನಿಜಗಳ ಸಾಗಾಣಿಕೆಗೆ ಬಳಸುವ ವಾಹನಗಳ ಮೇಲೆ ನಿಗಾವಹಿಸುವ ವ್ಯವಸ್ಥೆಯಡಿ ಖನಿಜ ಸಾಗಾಣಿಕೆ ವಾಹನಗಳ ಚಲನೆಯ ನೈಜ ಸಮಯದಲ್ಲಿ ಟ್ರ್ಯಾಕಿಂಗ್‌ ಮತ್ತು ಮೇಲ್ವಿಚಾರಣೆಗಾಗಿ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಐಟಿ ಸಕ್ರಿಯಗೊಳಿಸಿ ‘ಒನ್ ಸ್ಟೇಟ್ ಒನ್ ಜಿಪಿಎಸ್’ ಕಾರ್ಯಾನುಷ್ಠಾನಗೊಳಿಸಬೇಕು.

ಐಸಿಟಿ ಅಪ್ರೂವ್‌ ಎಐಎಸ್; ೧೪೦ ಸರ್ಟಿಫೈಡ್ ಜಿಪಿಎಸ್‌ಗಳನ್ನು ಅಳವಡಿಸಿಕೊಂಡು ಖನಿಜ ಸಾಗಾಣಿಕೆ ಮಾಡುವ ವಾಹನಗಳನ್ನು ‘ಒನ್ ಸ್ಟೇಟ್ ಒನ್ ಜಿಪಿಎಸ್’ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಗಮನ ಹರಿಸಿಲ್ಲ:

ಕಳೆದ ಜೂ.೨೩ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ‘ಒನ್ ಸ್ಟೇಟ್ ಒನ್ ಜಿಪಿಎಸ್’ ಕಾರ್ಯಾನುಷ್ಠಾನ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು/ಹಿರಿಯ ಭೂ ವಿಜ್ಞಾನಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭ ನಡೆಯಿತು. ಆದರೆ ಜಿಲ್ಲೆಯಲ್ಲಿ ‘ಒನ್ ಸ್ಟೇಟ್ ಒನ್ ಜಿಪಿಎಸ್’ ಅನುಷ್ಠಾನ ಸಂಬಂಧ ಜಿಪಿಎಸ್ ವಾಹನಗಳ ನೋಂದಣಿಗೆ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸಿಲ್ಲ.

ನಿರ್ದೇಶಕರ ಆದೇಶ ಕಸದ ಬುಟ್ಟಿಗೆ!:

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಯುಕ್ತ ಆರ್.ಗಿರೀಶ್ ಕಳೆದ ೨೦೨೩ರ ಜು.೧೦ ಹೊರಡಿಸಿರುವ ಆದೇಶದ ಪ್ರಕಾರ ೨೦೨೩ರ ಜು.೧೬ ರಿಂದ ಖನಿಜ ಸಾಗಾಣಿಕೆ ಪರವಾನಗಿ ಪಡೆಯಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಖನಿಜದ ಕೃತಕ ಅಭಾವ ಸೃಷಚ್ಟಿಯಾಗುವುದರ ಜತೆಗೆ ರಾಜಧನ ಸಂಗ್ರಹಣೆ ಕುಂಠಿತವಾಗುವ ಸಂಭವವಿದೆ ಎಂದು ಪತ್ರದಲಿ ಉಲ್ಲೇಖಿಸಿದ್ದಾರೆ.

೨೦೨೩ರ ಜು.೧೫ರೊಳಗೆ ‘ಒನ್ ಸ್ಟೇಟ್ ಒನ್ ಜಿಪಿಎಸ್’ ನೋಂದಾವಣಿಯಾಗದಿದ್ದಲ್ಲಿ ಕ್ವಾರಿ ಮತ್ತು ಕ್ರಷರ್‌ನಿಂದ ಬರುವ ವಾಹನಗಳು ಸಂಚಾರ ಇರುವುದಿಲ್ಲ. ಜು.೧೫ ರೊಳಗಾಗಿ ಖನಿಜ ಸಾಗಾಣಿಕೆ ಮಾಡುವ ವಾಹನಗಳನ್ನು ‘ ಒನ್ ಜಿಪಿಎಸ್’ ತಂತ್ರಾಂಶದಲ್ಲಿ ನೋಂದಣಿ ಸಂಬಂಧ ಅಗತ್ಯ ಕ್ರಮ ವಹಿಸಬೇಕು. ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ತಡೆ ತೆರವಿಗೆ ಮುಂದಾಗುತ್ತಿಲ್ಲ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ‘ಒನ್‌ ಸ್ಟೇಟ್‌ ಒನ್‌ ಜಿಪಿಎಸ್‌ ತಂತ್ರಾಂಶ ಬಳಸಬೇಕು’ ಎಂಬ ಆದೇಶದ ವಿರುದ್ಧ ಕೆಲ ಟಿಪ್ಪರ್‌ ಮಾಲೀಕರು ಹಾಗೂ ಕೆಲ ಕ್ವಾರಿ ಲೀಸ್‌ದಾರರು ತಡೆ ತಂದು ಜಿಪಿಎಸ್‌ ಇಲ್ಲದೆಯೂ ಉಪ ಖನಿಜ ಮಾರಾಟ ಮಾಡುತ್ತಿದ್ದಾರೆ. ಆದರೆ ಇಲಾಖೆ ತಡೆ ತೆರವಿಗೆ ಇನ್ನೂ ಮುಂದಾಗಿಲ್ಲ. ಇಲಾಖೆಯೇ ಟಿಪ್ಪರ್‌, ಕ್ರಷರ್‌ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಹಿರೀಕಾಟಿ ಗ್ರಾಮದ ಪ್ರಸನ್ನ ಆರೋಪಿಸಿದ್ದಾರೆ.

Share this article