ಕನ್ನಡಪ್ರಭ ವಾರ್ತೆ ಮಂಗಳೂರು
ಬಂಧಿತ ಆರೋಪಿಗಳಾದ ಮಹಮ್ಮದ್ ಶಾರೀಕ್ ಹಾಗೂ ಸಯ್ಯದ್ ಯಾಸೀನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಶಂಕಿತ ಉಗ್ರರು ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಕೊಂಡೊಯ್ದು ಆಟೋದಲ್ಲಿ ತೆರಳಿ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಕ್ಕೆ ಸಂಚು ನಡೆಸಿದ್ದರು.
೨೦೨೨ರ ನ.೧೯ರಂದು ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮಂಗಳೂರಿನಲ್ಲಿ ೨೦೨೦ ರಲ್ಲಿ ಕಂಡುಬಂದ ಉಗ್ರ ಗೋಡೆ ಬರಹ ಪ್ರಕರಣದ ಹಾಗೂ ಶಿವಮೊಗ್ಗ ಟ್ರಯಲ್ ಬಾಂಬ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಕುಕ್ಕರ್ ಬಾಂಬ್ ಆಟೋರಿಕ್ಷಾದಲ್ಲಿ ಸ್ಫೋಟಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಫೋಟದಿಂದ ಬಯಲಾಗಿತ್ತು. ಈ ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ ಕೂಡ ಗಾಯಗೊಂಡಿದ್ದರು.ಶಿವಮೊಗ್ಗದಲ್ಲಿ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ಬಂಧನವಾಗುತ್ತಿದ್ದಂತೆ ಶಾರೀಕ್ ಅಲ್ಲಿಂದ ಪರಾರಿಯಾಗಿ ಮಂಗಳೂರು, ಮೈಸೂರು, ಕೇರಳ, ತಮಿಳುನಾಡು ಸುತ್ತಾಡಿಕೊಂಡಿದ್ದ. ಹಿಂದು ವೇಷ ಧರಿಸಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಂದ ತನ್ನ ಉಗ್ರ ಕೃತ್ಯ ಮುಂದುವರೆಸಿದ್ದ. ಬಳಿಕ ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಿಕ್ಕಿಬಿದ್ದಿದ್ದ.
ಶಿವಮೊಗ್ಗ ಟ್ರಾಯಲ್ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿ ಬಂಧಿತ 10 ಮಂದಿ ಆರೋಪಿಗಳ ಪೈಕಿ ಇವರಿಬ್ಬರು ಸೇರಿದ್ದಾರೆ. ಶಿವಮೊಗ್ಗ ಘಟನೆಯ ಬಗ್ಗೆ ಆರೋಪಿಗಳ ವಿರುದ್ಧ ಎನ್‌ಐಎ ಜುಲೈ 30ರಂದು ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.