ಹೈದರಾಲಿ ಸೈನಿಕರ ಸದೆಬಡೆದು ಸಾಹಸ ಮೆರೆದ ಒನಕೆ ಓಬವ್ವ

KannadaprabhaNewsNetwork |  
Published : Nov 24, 2025, 02:00 AM IST
ಚಿತ್ರದುರ್ಗ | Kannada Prabha

ಸಾರಾಂಶ

ಸಂವಿಧಾನ ಸೌಧದಲ್ಲಿ ನಡೆದ ಒನಕೆ ಓಬವ್ವ ಜಯಂತಿಯಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಒನಕೆ ಓಬವ್ವಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆಯಿಂದ ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ವೀರವನಿತೆ ಒನಕೆ ಓಬವ್ವಳ ಜಯಂತಿಯನ್ನು ಸರ್ಕಾರ ಪ್ರತಿವರ್ಷವೂ ಆಚರಿಸುವ ಮೂಲಕ ಸ್ಮರಣೆ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಛಲವಾದಿ ಮಹಾಸಭಾ ತಾಲೂಕು ಘಟಕದಿಂದ ಸಂವಿಧಾನ ಸೌಧದಲ್ಲಿ ಭಾನುವಾರ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಕಳ್ಳಗಿಂಡಿಯ ಮೂಲಕ ಚಿತ್ರದುರ್ಗದ ಕೋಟೆಯೊಳಗೆ ನುಸುಳುತ್ತಿದ್ದ ಹೈದರಾಲಿ ಕಡೆಯ ಸೈನಿಕರನ್ನು ಓಬವ್ವ ಒನಕೆಯಿಂದ ಸದೆಬಡಿದು ಸಾಹಸ ಮೆರೆದಿದ್ದಾಳೆ. ಅಂತಹ ದಿಟ್ಟ ಮಹಿಳೆಯರು ಸಮಾಜಕ್ಕೆ ಬೇಕು. ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಸಂವಿಧಾನದ ಅಡಿಯಲ್ಲಿ ಕಾನೂನು ಪ್ರಕಾರ ಕೆಲಸ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದಾರೆ. ಕೆ.ಎಚ್.ರಂಗನಾಥ್, ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ ಅವರು ಛಲವಾದಿ ಜನಾಂಗದಲ್ಲಿ ಜನಿಸಿದವರು ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆರವರು ಎಂದೋ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಜಾತಿ ವ್ಯವಸ್ಥೆಯಲ್ಲಿ ಅವಕಾಶ ಸಿಗಲಿಲ್ಲ. ರಾಜ್ಯ ಸರ್ಕಾರ ಒನಕೆ ಓಬವ್ವ ಜಯಂತಿ ಆಚರಿಸುವ ಮೂಲಕ ಛಲವಾದಿ ಜನಾಂಗಕ್ಕೆ ಗೌರವ ಕೊಟ್ಟಿದೆ. ತ್ಯಾಗ ಮತ್ತು ಸಾಹಸದ ಮೂಲಕ ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಒನಕೆ ಓಬವ್ವ ಛಲವಾದಿ ಜನಾಂಗಕ್ಕೆ ಸೇರಿದವಳೆಂದು ನೀವುಗಳೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳಬೇಕೆಂದರು.

ಯಾವುದೇ ಜಾತಿಯಾಗಲಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹಳ ಮುಖ್ಯ. ಅದಕ್ಕಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಛಲವಾದಿ ಜನಾಂಗಕ್ಕೆ ಕರೆ ನೀಡಿದರು.

ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ, ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಬಸವಲಿಂಗಾನಂದ ಮಹಾಸ್ವಾಮಿ ಇವರುಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಹೆಚ್.ಶೇಷಪ್ಪ, ಡಿ.ಹೆಚ್.ನಟರಾಜ್, ತಹಶೀಲ್ದಾರ್ ವಿಜಯಕುಮಾರ್, ಡಿ.ಆರ್.ರವೀಂದ್ರ, ನರಸಿಂಹಮೂರ್ತಿ, ಹಾಲಮ್ಮ ನಟರಾಜ್, ಶರಣಪ್ಪ, ಟಿ.ನರಸಿಂಹಮೂರ್ತಿ, ಹನುಮಂತಪ್ಪ ಮಾರಪ್ಪ ಚೀಳಂಗಿ, ತಿಮ್ಮರಾಯಪ್ಪ, ಎಚ್.ಅಣ್ಣಪ್ಪಸ್ವಾಮಿ, ಗೋವರ್ಧನ, ಹನುಮಂತಪ್ಪ, ಸುವರ್ಣಮ್ಮ, ದೇವರಾಜ್, ಹೆಚ್.ರಾಮಚಂದ್ರಪ್ಪ, ಎನ್.ರಂಗಸ್ವಾಮಿ ಮತ್ತಿತರರು ಒನಕೆ ಓಬವ್ವ ಜಯಂತಿಯಲ್ಲಿ ಭಾಗವಹಿಸಿದ್ದರು.

PREV

Recommended Stories

ಕಾಡಾನೆಗಳ ದಾಳಿಗೆ ನೆಲಸಮವಾದ ಜೋಳದ ಫಸಲು
ವಿಸಿ ನಾಲಾ ರಸ್ತೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ..!