ಹೂವಿನಹಡಗಲಿ: ರಾಜ್ಯದ ಎಲ್ಲ ಕಡೆಗೂ ಈರುಳ್ಳಿ ಉತ್ತಮ ಇಳುವರಿ ಬಂದಿದ್ದು, ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲದೇ ಕಂಗಾಲಾದ ರೈತ ಕೊನೆಗೆ ಕುರಿ ಮೇಯಿಸಿದ್ದಾರೆ.
ಹೌದು, ತಾಲೂಕಿನ ಉತ್ತಂಗಿ ಗ್ರಾಮದ ಮೂಲಿಮನಿ ಶರಣಪ್ಪ 3 ಎಕರೆ ಪ್ರದೇಶದಲ್ಲಿ ಲಕ್ಷಾಂತರ ವೆಚ್ಚದಲ್ಲಿ ಈರುಳ್ಳಿ ಬೆಳೆದಿದ್ದಾರೆ, ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು, ಅಕ್ಷರಶಃ ನಷ್ಟ ಅನುಭವಿಸುವಂತಾಗಿದೆ.ಕಟಾವಿಗೆ ಬಂದ ಈರುಳ್ಳಿ ಬೆಳೆಯನ್ನು ಕುರಿ ಮೇಕೆ ಬಿಟ್ಟು ಮೇಯಿಸುವಾಗ ರೈತ ಶರಣಪ್ಪ ನಮ್ಮ ಬದುಕಿಗೆ ಆಸರೆಯಾಗಬೇಕಿದ್ದ ಈರುಳ್ಳಿ ಕಣ್ಣೀರು ತರಿಸಿದೆ. ತೀವ್ರ ಸಂಕಷ್ಟಕ್ಕೆ ಈಡಾಗಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಸರ್ಕಾರ ಬರದಿದ್ದರೇ ರೈತ ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆಯಂತಹ ಹಾದಿ ಹಿಡಿಯುವ ಪರಿಸ್ಥಿತಿ ತರುತ್ತದೆ ಎಂದು ನೋವು ತೊಡಿಕೊಂಡರು.
ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹1000, 800ಗಳಿಗೆ ಕುಸಿದಿದೆ. ಈರುಳ್ಳಿ ಕಟಾವು ಮಾಡಿ ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲು ₹50 ಕೆಜಿಯ ಪ್ರತಿ ಪಾಕೀಟ್‌ಗೆ ₹ 300 ರಿಂದ ₹ 400 ಖರ್ಚು ತಗುಲುತ್ತದೆ. ಕಟಾವು, ಸಾಗಣೆ ವೆಚ್ಚದ ಹಣವೂ ವಾಪಸ್ ಸಿಗದ ಕಾರಣ ರೈತರು ಸ್ವತಃ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.ಮೂರು ಎಕರೆಯಲ್ಲಿ ಈರುಳ್ಳಿ ಬೆಳೆಯಲು ₹1.30 ಲಕ್ಷ ಖರ್ಚು ಮಾಡಿರುವೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ಮಾರಾಟದ ಹಣ ಕಟಾವು ಖರ್ಚಿಗೂ ಸಾಲುವುದಿಲ್ಲ. ಹೀಗಾಗಿ ಬೇರೆ ಬೆಳೆ ಬಿತ್ತನೆಗೆ ಹೊಲ ಸಿದ್ದಪಡಿಸುವುದಕ್ಕಾಗಿ,ಈರುಳ್ಳಿ ಹೊಲವನ್ನು ಕುರಿ ಮೇಯಿಸಲು ಬಿಟ್ಟಿದ್ದೇವೆ. ಹಗಲು ರಾತ್ರಿ ಕಷ್ಟಪಟ್ಟು ಬೆಳೆಸಿದ ಬೆಳೆಯನ್ನು ಸ್ವತಃ ನಾಶಪಡಿಸಲು ನೋವಾಗುತ್ತಿದೆ ಎಂದು ರೈತ ಮೂಲಿಮನಿ ಶರಣಪ್ಪ ಅಳಲು ತೋಡಿಕೊಂಡರು.
ಈರುಳ್ಳಿ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ಪ್ರತಿ ಕ್ವಿಂಟಲ್‌ಗೆ ₹2,500ಗಳು ಉತ್ಪಾದನಾ ವೆಚ್ಚ ತಗುಲುತ್ತದೆ. ಸದ್ಯದ ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಅರ್ಧದಷ್ಟು ಕಡಿಮೆಯಾಗಿರುವುದರಿಂದ ರೈತರು ಸಾಲಗಾರರಾಗುತ್ತಿದ್ದಾರೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ₹4000 ಗಳ ಬೆಂಬಲ ಬೆಲೆಗೆ ಖರೀದಿಸಬೇಕೆಂದು ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ. ಸಿದ್ದೇಶ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ತಾಲೂಕಿನಲ್ಲಿ ಹಿಂಗಾರಿಯಲ್ಲಿ 40 ಹೆಕ್ಟೇರ್‌ಗೂ ಅಧಿಕ ಈರುಳ್ಳಿ ಬಿತ್ತನೆಯಾಗಿತ್ತು. ನೆರೆಯ ರಾಜ್ಯದ ಈರುಳ್ಳಿ ಮಾರುಕಟ್ಟೆಗೆ ಬಂದ ಕಾರಣ ಬೆಲೆ ಕುಸಿತವಾಗಿದೆ. ಪ್ರತಿ ಈರುಳ್ಳಿ ಸಂಗ್ರಹಣಾ ಘಟಕ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯಿಂದ ₹87 ಸಾವಿರ ಸಹಾಯ ಧನ ನೀಡುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜ ತಿಳಿಸಿದ್ದಾರೆ.