ಬೆಂಗಳೂರು : ಖಾತಾ ದಾಖಲೆ ಪಡೆಯಲು ಕಂದಾಯ ಕಚೇರಿ, ಪಾಲಿಕೆ ಕಚೇರಿಗಳಿಗೆ ಅಲೆಯುವುದು, ಮಧ್ಯವರ್ತಿಗಳ ಹಾವಳಿ, ವ್ಯಾಪಕ ಭ್ರಷ್ಟಾಚಾರ ತಪ್ಪಿಸಲು ಆನ್‌ಲೈನ್ ಅಥವಾ ಬೆಂಗಳೂರು ಒನ್ ಸೆಂಟರ್ ಮೂಲಕ ‘ಇ-ಖಾತಾ’ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಜಾರಿಗೊಳಿಸಲಾಗಿದೆ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ತಿಳಿಸಿದ್ದಾರೆ.
ಬೆಂಗಳೂರಿನ 25 ಲಕ್ಷಕ್ಕೂ ಹೆಚ್ಚು ಖಾತೆಗಳು ಬಿಬಿಎಂಪಿ ಇ ಆಸ್ತಿ ವೆಬ್‌ಸೈಟ್ BBMPeAasthi.karnataka.gov.in ನಲ್ಲಿ ಲಭ್ಯವಿದೆ. ನಾಗರಿಕರು ಬೆಂಗಳೂರಿನ ಖಾತಾಗಾಗಿ ಎಲ್ಲಿಂದ ಬೇಕಾದರೂ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಯಾರನ್ನೂ ಸಂಪರ್ಕಿಸುವ ಅಗತ್ಯವೂ ಇಲ್ಲ. ಅರ್ಜಿ ಸಲ್ಲಿಸಿದ ಬಳಿಕ ಸ್ಥಿತಿಗತಿಯನ್ನು ಆನ್‌ಲೈನ್‌ನಲ್ಲೇ ತಿಳಿದುಕೊಳ್ಳಬಹುದು ಎಂದು ಮೌದ್ಗಿಲ್ ಹೇಳಿದ್ದಾರೆ.
ಸ್ವಯಂಚಾಲಿತ ಪ್ರೊಸ್ಸೆಸಿಂಗ್, ಅನುಮೋದನೆ ಮಾಡುವ ವ್ಯವಸ್ಥೆ ಕಲ್ಪಿಸಿರುವ ಕಾರಣ ಸಲ್ಲಿಕೆಯಾದ ಅರ್ಜಿಗಳು ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಯ ಡ್ಯಾಷ್‌ಬೋರ್ಡ್‌ಗೆ ತಲುಪುತ್ತವೆ. ಅವುಗಳನ್ನು 64 ಹೆಚ್ಚುವರಿ ಕಂದಾಯ ಅಧಿಕಾರಿಗಳು (ಎಆರ್‌ಒ) ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಈ ಪ್ರಕ್ರಿಯೆಯನ್ನು ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿ ಗಮನಿಸುತ್ತಾರೆ. ಇ-ಖಾತಾ ಅರ್ಜಿ ಸರಾಸರಿ ಎರಡ್ಮೂರು ದಿನಗಳಲ್ಲಿ ವಿಲೇವಾರಿ ಆಗಬೇಕು. ಮ್ಯುಟೇಷನ್, ತಿದ್ದುಪಡಿ ಮತ್ತು ಆಕ್ಷೇಪಣೆ ಇರುವ ಖಾತಾ ದಾಖಲೆಗಳು ಮಾತ್ರ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ನಾಗರಿಕರ ನೆರವಿಗಾಗಿ ಸಹಾಯವಾಣಿ ಸಂಖ್ಯೆ 94806 83695 ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಐಟಿ ವ್ಯವಸ್ಥೆಯು ನಾಗರಿಕರು ಸಲ್ಲಿಸುವ ಅರ್ಜಿಗಳನ್ನು ಎಲ್ಲ ಅಧಿಕಾರಿಗಳ ನಡುವೆ ಸಮಾನವಾಗಿ ಹಂಚಿಕೆ ಮಾಡುತ್ತದೆ. ಇದರಿಂದ ಎಲ್ಲರಿಗೂ ಕೆಲಸದ ಹಂಚಿಕೆಯಾಗುತ್ತದೆ. ಕೆಲಸ ಮಾಡಿಸಿಕೊಡಲು ಹಣ ಪಡೆಯುವ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಕಂದಾಯ ಇಲಾಖೆಯ ಕಾವೇರಿ ಸಾಫ್ಟ್‌ವೇರ್‌ನೊಂದಿಗೆ ಜಿಬಿಎ ಆಸ್ತಿಗಳನ್ನು ಜೋಡಿಸಲಾಗಿದೆ. ಆಸ್ತಿ ತೆರಿಗೆ ದಾಖಲೆಗಳು ಮತ್ತು ಬೆಸ್ಕಾಂ ಮಾಲೀಕತ್ವದ ಮಾಹಿತಿ ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತದೆ ಎಂದು ಮನೀಷ್ ಮೌದ್ಗಿಲ್ ಹೇಳಿದ್ದಾರೆ.