ನೀವಿರುವಲ್ಲಿಂದಲೇ ‘ಡ್ರಂಕ್‌ ಅಂಡ್‌ ಡ್ರೈವ್‌’ ವಿಚಾರಣೆ ಎದುರಿಸಿ!

KannadaprabhaNewsNetwork |  
Published : Feb 21, 2024, 02:00 AM ISTUpdated : Feb 21, 2024, 03:40 PM IST
Drink and drive

ಸಾರಾಂಶ

ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಆನ್‌ಲೈನ್‌ನಲ್ಲೇ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳುವ ಹೊಸ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೈಸೂರು, ಬೆಳಗಾವಿಯಲ್ಲಿ ಶೀಘ್ರ ಹೊಸ ವ್ಯವಸ್ಥೆ ಜಾರಿಯಾಗಲಿದೆ.

ಮೋಹನ ಹಂಡ್ರಂಗಿ 
ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾನಮತ್ತ ಚಾಲನೆ (ಡ್ರಂಕ್‌ ಅಂಡ್‌ ಡ್ರೈವ್‌) ಪ್ರಕರಣಗಳಲ್ಲಿ ವಾಹನದ ಚಾಲಕರು ದಂಡ ಪಾವತಿಸಲು ಇನ್ನು ಮುಂದೆ ನ್ಯಾಯಾಲಯಕ್ಕೆ ಓಡಾಡುವ ಅಗತ್ಯವಿಲ್ಲ. ಏಕೆಂದರೆ, ರಾಜ್ಯ ತರಬೇತಿ, ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗವು ವಾಹನ ಚಾಲಕರು ಆನ್‌ಲೈನ್‌ ವಿಡಿಯೋ ಕಾನ್ಫರೆನ್ಸ್‌ ಮುಖಾಂತರ ವಿಚಾರಣೆ ಎದುರಿಸಿ ದಂಡ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.

ಮೊದಲಿಗೆ ರಾಜ್ಯದ ಮೈಸೂರು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ. ಈ ಎರಡೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಹೊಸ ವ್ಯವಸ್ಥೆಯ ಸಾಧಕ-ಬಾಧಕ ಪರಿಶೀಲಿಸಿ ಬಳಿಕ ರಾಜ್ಯದ ಉಳಿದ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ. 

ಇನ್ನು ಕೆಲವೇ ದಿನಗಳಲ್ಲಿ ಈ ಪ್ರಾಯೋಗಿಕವಾಗಿ ವ್ಯವಸ್ಥೆ ಜಾರಿಯಾಗಲಿದೆ.ಪ್ರಸ್ತುತ ಪಾನಮತ್ತ ಚಾಲನೆ ಪ್ರಕರಣಗಳಲ್ಲಿ ಸಂಚಾರ ಪೊಲೀಸರು ವಾಹನವನ್ನು ಜಪ್ತಿ ಮಾಡಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿದ್ದಾರೆ. 

ಬಳಿಕ ವಾಹನದ ಚಾಲಕ ಪೊಲೀಸ್‌ ಠಾಣೆಗೆ ಬಂದು ದಂಡ ಪಾವತಿಸಿ ವಾಹನವನ್ನು ಬಿಡಿಸಿಕೊಂಡು ಹೋಗಬಹುದಾಗಿದೆ. ಕೆಲ ಪಾನಮತ್ತ ಚಾಲನೆ ಪ್ರಕರಣಗಳಲ್ಲಿ ದಂಡ ಪಾವತಿ ವಿಳಂಬವಾದರೆ, ನ್ಯಾಯಾಲಯಕ್ಕೆ ತೆರಳಿ ದಂಡ ಪಾವತಿಸಬೇಕು. 

ಅಲ್ಲಿ ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗಿ ಖುದ್ದು ವಿಚಾರಣೆ ಎದುರಿಸಿ ದಂಡ ಪಾವತಿಸಬೇಕು. ಬಳಿಕ ದಂಡ ಪಾವತಿಯ ರಶೀದಿ ಪಡೆದು ಸಂಬಂಧಪಟ್ಟ ಸಂಚಾರ ಪೊಲೀಸ್‌ ಠಾಣೆಗೆ ಬಂದು ರಶೀದಿ ಹಾಜರುಪಡಿಸಿ ನಂತರ ತಮ್ಮ ವಾಹನವನ್ನು ಬಿಡಿಸಿಕೊಂಡು ಹೋಗಬೇಕಿದೆ.

ವಾಹನ ಚಾಲಕರು ನ್ಯಾಯಾಲಯಕ್ಕೆ ತೆರಳಿ ವಕೀಲರನ್ನು ನೇಮಿಸಿಕೊಂಡು ಖುದ್ದು ವಿಚಾರಣೆ ಹಾಜರಾಗಿ ದಂಡ ಪಾವತಿಸುವ ಪ್ರಕ್ರಿಯೆಗೆ ಸಾಕಷ್ಟು ಸಮಯ ವ್ಯಯವಾಗುತ್ತಿದೆ. 

ಈ ಹಿನ್ನೆಲೆಯಲ್ಲಿ ಸಮಯ ಉಳಿಸುವ ಹಾಗೂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲೇ ವಿಚಾರಣೆ ಎದುರಿಸಿ, ಆನ್‌ಲೈನ್‌ನಲ್ಲೇ ದಂಡ ಪಾವತಿಸುವ ವ್ಯವಸ್ಥೆ ಜಾರಿಗೆ ಮುಂದಾಗಲಾಗಿದೆ. ಈ ಹೊಸ ವ್ಯವಸ್ಥೆಗೆ ಸಂಬಂಧಪಟ್ಟ ನ್ಯಾಯಾಲಯಗಳು ಸಹ ಒಪ್ಪಿಗೆ ಸೂಚಿಸಿವೆ ಎಂದು ತಿಳಿದು ಬಂದಿದೆ.

ಪಾನಮತ್ತ ಚಾಲನೆ ಪ್ರಕರಣ ದಾಖಲಾದ ಬಳಿಕ ಚಾಲಕರ ಮೊಬೈಲ್‌ಗೆ ಸಂದೇಶವೊಂದು ಬರಲಿದೆ. ಆ ಸಂದೇಶದಲ್ಲಿನ ಲಿಂಕ್‌ ತೆರೆದರೆ, ವಿಚಾರಣೆ ದಿನಾಂಕ ಹಾಗೂ ಸಮಯದ ಮಾಹಿತಿ ಇರಲಿದೆ. 

ಚಾಲಕರು ನಿಗದಿತ ಸಮಯಕ್ಕೆ ಆ ಲಿಂಕ್‌ ತೆರೆದು ಆನ್‌ಲೈನ್‌ನಲ್ಲಿ ವಿಡಿಯೋ ಕಾನ್ಫರೆನ್ಸ್‌ ಮುಖಾಂತರ ವಿಚಾರಣೆಗೆ ಹಾಜರಾಗಿ ನ್ಯಾಯಾಧೀಶರ ಆದೇಶದ ಅನುಸಾರ ದಂಡ ಪಾವತಿಸಬೇಕು. 

ಈ ದಂಡವನ್ನು ಆನ್‌ಲೈನ್‌ನಲ್ಲೇ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಚಾಲಕರು ತಾವು ಇರುವ ಜಾಗದಿಂದಲೇ ವಿಡಿಯೋ ಕಾನ್ಫರೆನ್ಸ್‌ ಮುಖಾಂತರ ವಿಚಾರಣೆ ಎದುರಿಸಿ, ದಂಡ ಪಾವತಿಸಿ ತ್ವರಿತಗತಿಯಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...