೧೬೧೬ ಸರ್ಕಾರಿ ಬಾವಿ, ಕೊಳವೆ ಬಾವಿಗಳಲ್ಲಿ ೪೪ಕ್ಕೆ ಮಾತ್ರ ಮಳೆ ಕೊಯ್ಲು!

KannadaprabhaNewsNetwork |  
Published : Jun 07, 2025, 01:06 AM IST
6ಮಳ‍ೆನೀರು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೊಳಿಸಲು ಮಳೆನೀರು ಕೊಯ್ಲನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯ. ಆದ್ದರಿಂದ ಸರ್ಕಾರದ ಎಲ್ಲಾ ತೆರೆದ ಹಾಗೂ ಕೊಳವೆ ಬಾವಿಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೊಳಿಸಲು ಮಳೆನೀರು ಕೊಯ್ಲನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯ. ಆದ್ದರಿಂದ ಸರ್ಕಾರದ ಎಲ್ಲಾ ತೆರೆದ ಹಾಗೂ ಕೊಳವೆ ಬಾವಿಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಬೇಕು ಎಂದು

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಳೆ ನೀರು ಕೊಯ್ಲು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದರೂ ಸಹ ಅಂತರ್ಜಲದ ಮಟ್ಟ ನಿರೀಕ್ಷಿತ ಮಟ್ಟಕ್ಕಿಂತ ಕೆಳಭಾಗದಲ್ಲಿದೆ. ಹೆಚ್ಚು ಮಳೆಯಾದರೂ ನೀರು ಸರಾಗವಾಗಿ ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರವನ್ನು ಸೇರುತ್ತಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಿಂದಾಗಿ ಮೇಲ್ಮಣ್ಣು ಕೊಚ್ಚಿಹೋಗಿ ಲ್ಯಾಟರೈಟ್ ಮಣ್ಣು ಉಳಿದು, ನೀರು ಇಂಗುವ ಪ್ರಮಾಣ ಕಡಿಮೆಯಾಗಿದೆ. ಮಳೆ ನೀರು ಕೊಯ್ಲು ಅಳವಡಿಸುವುದರಿಂದ ಇಂಗುವಿಕೆಯನ್ನು ಹೆಚ್ಚಿಸಲು ಸಾಧ್ಯ. ಇದರಿಂದ ಅಂತರ್ಜಲವೃದ್ಧಿಯಾಗುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು.ಜಿಲ್ಲೆಯಲ್ಲಿ ರೈತರು ಹಾಗೂ ಖಾಸಗಿಯವರು ಹೆಚ್ಚು ಮಳೆ ನೀರು ಕೊಯ್ಲುಗಳನ್ನು ಅಳವಡಿಸಿದ್ದಾರೆ. ಆದರೆ ಸರ್ಕಾರದ ನೀರಿನ ಮೂಲಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ಅಳವಡಿಸಿರುವುದು ಕಂಡುಬಂದಿದೆ. ಕಳೆದ ಸಾಲಿನಲ್ಲಿ ಈ ಬಗ್ಗೆ ಕಾರ್ಯಪ್ರವೃತ್ತರಾಗಲು ಸೂಚಿಸಿದರೂ ಸಹ ಪ್ರಗತಿ ಸಾಧಿಸಿಲ್ಲ ಎಂದು ಡಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಾಲಿನಲ್ಲಿ ಒಟ್ಟು ಬಾವಿಗಳಲ್ಲಿ ಶೇ. 50 ಕ್ಕೆ ಮಳೆ ನೀರು ಕೊಯ್ಲು ಅಳವಡಿಸಲು ಸೂಚನೆ ನೀಡಿದರು.ಜಿಲ್ಲೆಯಲ್ಲಿ ಒಟ್ಟು 1616 ಸರ್ಕಾರಿ ತೆರೆದ ಹಾಗೂ ಕೊಳವೆ ಬಾವಿಗಳು ಇದ್ದು, ಆದರೆ ಕೇವಲ 44 ಕ್ಕೆ ಮಾತ್ರ ಮಳೆ ನೀರು ಕೊಯ್ಲು ಅಳವಡಿಕೆಯಾಗಿದೆ. ಬಾಕಿ ಉಳಿದ 1572 ಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆ ಕಾರ್ಯವನ್ನು ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಉದಯ್ ಕುಮಾರ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ವಿವಿಧ ಜಿಲ್ಲಾ

ಮಟ್ಟದ ಅಧಿಕಾರಿಗಳು, ತಹಸೀಲ್ದಾರ್‌ಗಳು, ತಾಲೂಕು ಪಂಚಾಯತ್ ಇ.ಒ.ಗಳು ಮತ್ತಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ