ಮರಿಯಮ್ಮನಹಳ್ಳಿಯಲ್ಲಿ ರಕ್ತದಾನ ಶಿಬಿರ, 133 ಜನರಿಂದ ರಕ್ತದಾನ
ಯಾವುದೇ ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ರಕ್ತದಾನಕ್ಕೆ ಮುಂದಾದಾಗ ಅದಕ್ಕೆ ಉತ್ತಮ ಮೌಲ್ಯ ಬರುತ್ತದೆ ಎಂದು ಬಿಎಂಎಂ ಇಸ್ಪಾತ್ ಸಂಸ್ಥೆಯ ಆರೋಗ್ಯಾಧಿಕಾರಿ ಡಾ. ಪಿ. ವಿಜಯವೆಂಕಟೇಶ ಹೇಳಿದರು.
ಇಲ್ಲಿಗೆ ಸಮೀಪದ ಬಿಎಂಎಂ ಸಂಸ್ಥೆಯ ವೃತ್ತೀಯ ಆರೋಗ್ಯ ಕೇಂದ್ರದಲ್ಲಿ ಬಿಎಂಎಂ ಸಂಸ್ಥೆ, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆ ಮತ್ತು ವಿಮ್ಸ್ ರಕ್ತ ಭಂಡಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಯಾವುದೇ ಒಬ್ಬ ವ್ಯಕ್ತಿಯ ಅಮೂಲ್ಯ ಜೀವ ಉಳಿಸುವ ಶಕ್ತಿ ಇರುವುದು ರಕ್ತಕ್ಕೆ ಮಾತ್ರ. ಇದೊಂದು ನಿಸ್ವಾರ್ಥ ಸೇವೆ. ಈ ಕಾರ್ಯ ಅಸಂಖ್ಯಾತ ಜೀವ ಉಳಿಸಲು ಸಹಕಾರಿಯಾಗಿದೆ. ಯಾವುದೇ ಆರೋಗ್ಯವಂತ ವ್ಯಕ್ತಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹೃದಯಾಘಾತ, ಪಾರ್ಶ್ವವಾಯು, ಹೃದಯ ರಕ್ತನಾಳಗಳ ಕಾಯಿಲೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.ಬಿಎಂಎಂ ಸಂಸ್ಥೆಯ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ ಹೆಗಡೆ ಮಾತನಾಡಿ, ಎಷ್ಟೋ ಬಾರಿ ರಸ್ತೆ ಅಪಘಾತ, ಹೆರಿಗೆ ಸಂದರ್ಭ, ಶಸ್ತ್ರ ಚಿಕಿತ್ಸೆ, ತುರ್ತು ಸಂದರ್ಭಗಳು ಮತ್ತು ಅವಶ್ಯಕತೆ ಇರುವವರಿಗೆ ರಕ್ತ ನೀಡುವುದರಿಂದ ಅವರ ಜೀವ ಉಳಿಸಿದ ಕೀರ್ತಿ ನಮ್ಮದಾಗುತ್ತದೆ ಎಂದು ಹೇಳಿದರು.
ಆನಂತರ ಸಂಸ್ಥೆಯ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರು ಒಟ್ಟು 133 ಜನರು ರಕ್ತದಾನ ಮಾಡಿದರು.
(20ಎಂಎಂಎಚ್1)