ಬ್ಯಾಡಗಿ: ರೈತನ ಶ್ರೇಯೋಭಿವೃದ್ಧಿ ಬಯಸುವ ಏಕೈಕ ಮಾರುಕಟ್ಟೆ ಬ್ಯಾಡಗಿ ಎಪಿಎಂಸಿ ಆರಂಭದಿಂದಲೂ ನಡೆಯುತ್ತಿರುವ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಾಪಾರದಿಂದಲೇ ವರ್ತಕರಿಗೆ ಪುಣ್ಯ ಲಭಿಸಿದ್ದು, ಹೂಡಿದ ಬಂಡವಾಳ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರ ಬೆಳೆಗೆ ಸ್ಪರ್ಧಾತ್ಮಕ ದರ, ತೂಕದಲ್ಲಿ ಪಾರದರ್ಶಕತೆ, ಮಾರಾಟ ಮಾಡಿದ ದಿನವೇ ಹಣ ಬಟವಡೆ ಸೇರಿದಂತೆ, ವಿಶ್ವಾಸವಿರುವ ರೈತರಿಗೆ ಹಂಗಾಮಿನಲ್ಲಿ ಕೈಸಾಲ ನೀಡುವಂತಹ ಪದ್ಧತಿ ಇಲ್ಲಿಯ ವರ್ತಕರು ರೂಢಿಸಿಕೊಂಡಿದ್ದು ಹೀಗಾಗಿ ರೈತರು ಮೆಣಸಿನಕಾಯಿ ಮಾರಾಟಕ್ಕೆಂದು ಸುಮಾರು 500 ಕಿ.ಮೀ. ದೂರದಿಂದ ಬ್ಯಾಡಗಿಗೆ ಬಂದು ಹೋಗುತ್ತಿದ್ದಾರೆ ಎಂದರು.
ಮೆಣಸಿನಕಾಯಿ ಉದ್ದಿಮೆ: ಒಣ ಮೆಣಸಿನಕಾಯಿ ಬೆಳೆಯಲ್ಲಾದ ಕ್ರಾಂತಿಕಾರಿ ಬೆಳವಣಿಗೆಯಿಂದ ಬಹುದೊಡ್ಡ ಉದ್ದಿಮೆಯಾಗಿ ಪರಿವರ್ತನೆಗೊಂಡಿದೆ. ರೂಪಾಂತರಗೊಂಡ ಮೆಣಸಿನಕಾಯಿ ಆಹಾರ ಪದಾರ್ಥ ಸೇರಿದಂತೆ ಔಷಧಿ, ಲಿಫಸ್ಟಿಕ್ ಕಲರ್, ಪೇಯನ್ ಬಾಮ್ಸ್ ಇನ್ನಿತರ ಕೆಲಸಗಳಿಗೆ ಉಪಯೋಗವಾಗುತ್ತಿದೆ, ಇದರ ಪರಿಣಾಮ ಮೆಣಸಿನಕಾಯಿ ಬಹುದೊಡ್ಡ ಉದ್ದಿಮೆಯಾಗಿ ರೂಪುಗೊಂಡಿದ್ದು ಬ್ಯಾಡಗಿ ಸುತ್ತಮುತ್ತ ಸುಮಾರು 40 ಕೋಲ್ಡ್ ಸ್ಟೋರೆಜ್ ಸೇರಿದಂತೆ ನೂರಾರು ಪೌಡರ ಫ್ಯಾಕ್ಟರಿಗಳು ತಲೆ ಎತ್ತುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದೆ, ತಳಿ ಸಂಶೋಧನಾ ಕೇಂದ್ರಕ್ಕೆ ಹಲವು ವರ್ಷದಿಂದ ಬೇಡಿಕೆಯಿದೆ. ನಮ್ಮ ಅಧಿಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಅನುಮೋದನೆ ಮಾಡಲಾಗಿತ್ತು, ಇದೀಗ ಅದನ್ನು ಅಳವಡಿಸಿಕೊಳ್ಳುವ ಭರವಸೆ ಇದೆ ಎಂದರು.ಲಾಭಕ್ಕಾಗಿ ಬಡಿದಾಡಿ: ಸಾನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಅಭಿನವ ಗವಿ ಶ್ರೀಗಳು ಮಾತನಾಡಿ, ರೈತರನ್ನೇ ದೇವರೆಂದು ಒಪ್ಪಿಕೊಂಡಂತಹ ದೇಶ ನಮ್ಮದು, ಆತನಿಗೆ ಮೋಸವೆಸಗಿದರೇ ದೇವರಿಗೆ ಮೋಸ ಮಾಡಿದಂತೆ. ವ್ಯಾಪಾರಸ್ಥರು ಲಾಭಕ್ಕಾಗಿ ಬಡಿದಾಡುವುದರಲ್ಲಿ ಧರ್ಮವಿದೆ. ಆದರೆ ಮೋಸ ಮಾಡಲೆಂದೇ ವ್ಯಾಪಾರ ಮಾಡಿದರೇ ಅದರ ಪರಿಣಾಮ ಬಹಳಷ್ಟು ಕೆಟ್ಟದಾಗಿರಲಿದೆ. ಇದಕ್ಕೆ ಅಧ್ಯಾತ್ಮ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದರೇ ಎಲ್ಲವೂ ಅರ್ಥವಾಗುತ್ತದೆ ಎಂದರು.
ಈ ವೇಳೆ ಮಾಜಿ ಸಂಸದರಾದ ಸಂಗಣ್ಣ ಕರಡಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಭರತ ಬೊಮ್ಮಾಯಿ, ಸಂತೋಷ ಪಾಟೀಲ್, ಮಾಲೀಕರಾದ ಅವಿನಾಷ ಪಾಟೀಲ, ವಿನಾಯಕ ಮಾಳೇನಹಳ್ಳಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.