ಕನ್ನಡಪ್ರಭ ವಾರ್ತೆ ಮದ್ದೂರು
ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ತೈಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳಿಂದ ಅಸಾಧ್ಯ. ಸಹಕಾರ ಸಂಘಗಳು ರೈತರಿಗೆ ಕಾಲ ಕಾಲಕ್ಕೆ ಸಾಲ ಸೌಲಭ್ಯ ನೀಡಿ ರೈತರ ಬೆನ್ನೆಲುಬಾಗಿ ನಿಂತಿವೆ. ಸಹಕಾರ ಕ್ಷೇತ್ರದಲ್ಲಿ ಸಂಘಗಳ ಪಾತ್ರ ಅಪಾರವಾಗಿದೆ ಎಂದರು.ಸಹಕಾರ ಕ್ಷೇತ್ರದ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಧೃಡಗೊಳ್ಳುವ ಮೂಲಕ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದ್ದಾರೆ. ಇತ್ತಿಚೀನ ದಿನಗಳಲ್ಲಿ ತಾಲೂಕಿನ ಕೆಲವು ಸಹಕಾರ ಸಂಘಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಿಂದ ಇತರೆ ಸಂಘಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ ಮಾತನಾಡಿ, ಗ್ರಾಮೀಣ ಭಾಗದ ಜನರ, ಮಹಿಳೆಯರ ಸ್ವಾವಲಂಬನೆಗೆ ಜಿಲ್ಲಾದ್ಯಂತ ಇರುವ ಸಹಕಾರ ಸಂಘಗಳು ಸಾಕಷ್ಟು ಅನುದಾನ ನೀಡುತ್ತಿದ್ದು, ಜಿಲ್ಲೆಯಲ್ಲಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಮಾತನಾಡಿದರು. ಡಾ.ದಿವ್ಯ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೋಗಿಗೌಡ, ಚಲುವರಾಜು, ಪಿ.ಸಂದರ್ಶ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ತೈಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಂಕಪ್ಪ, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟದ ವಿಶೇಷಾಧಿಕಾರಿ ಕೆ.ಅನಿತಾ, ಟಿಎಪಿಸಿಎಂಎಸ್ ಆಡಳಿತಾಧಿಕಾರಿ ಎಚ್.ಆರ್.ನಾಗಭೂಷಣ್, ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಅಕಲಪ್ಪ ರೆಡ್ಡಿ ಉಪ ವ್ಯವಸ್ಥಾಪಕ ಡಾ.ಎ.ಎನ್ ಮಂಜೇಶ್ ಗೌಡ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರು, ವಿಸ್ತರಣಾಧಿಕಾರಿಗಳು ಹಾಗೂ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.