ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾನಿಲಯ, ಸ್ವರ್ಣ ರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ವತಿಯಿಂದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕುವೆಂಪು ವಿವಿ ಎದುರು ತಮಟೆ ಚಳುವಳಿ ನಡೆಸಲಾಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಅವರು,‘ಈ ವಿಚಾರ ಸಂಕಿರಣವು ಬಲಪಂಥೀಯ ಸೈದ್ಧಾಂತಿಕ ಕಾರ್ಯಸೂಚಿಯನ್ನು ಉತ್ತೇಜಿಸುತ್ತದೆ, ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳು ಮತ್ತು ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಚೈತನ್ಯಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದರು.
‘ಭಗವದ್ಗೀತೆ ಎನ್ನುವುದೇ ಒಂದು ಅಪ್ರಸ್ತುತ ಹಾಗೂ ಹಳೆಯ ವಿಚಾರ, ಶತಶತಮಾನಗಳಿಂದ ವರ್ಣಾಶ್ರಮವನ್ನು ಪಾಲಿಸಿಕೊಂಡು ಬಂದಿರುವ ಸಿದ್ಧಾಂತ. ಈಗ, ದೇಶದಲ್ಲಿ ಸಂವಿಧಾನ ಜಾರಿಯಲ್ಲಿದೆ. ಗಂಭೀರ ಅಪರಾಧವೊಂದನ್ನು ಮಾಡುವುದಕ್ಕೆ ಹುರಿದುಂಬಿಸುವ ಜೊತೆಗೆ ವರ್ಣಾಶ್ರಮವನ್ನು ಸಮರ್ಥನೆ ಮಾಡಿಕೊಳ್ಳುವುದೇ ಭಗದ್ಗೀತೆಯ ಒಟ್ಟು ಸಾರಾಂಶ. ಆದ್ದರಿಂದ, ವಿಶ್ವವಿದ್ಯಾಲಯದ ಒಳಗೆ ಈ ಕುರಿತ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ. ಏಕೆಂದರೆ, ಇಲ್ಲಿ ಬೇರೆಬೇರೆ ಜಾತಿ ಮತ್ತು ಧರ್ಮದ ಮಕ್ಕಳು ಓದುತ್ತಿದ್ದಾರೆ. ನಾಳೆ ಬೇರೆಯವರು ಬಂದು ಕುರಾನ್-ಬೈಬಲ್ ನಲ್ಲಿ ಒಳ್ಳೆಯ ಅಂಶಗಳಿವೆ ಎಂದು ಕೇಳಿದರೆ ವಿವಿ ಏನು ಮಾಡುತ್ತದೆ ಎಂದು ಪ್ರಶ್ನಿಸಿದರು.ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮವನ್ನು ಬಹಿಷ್ಕರಿಸಲಿ: ಉಪ ಕುಲಪತಿಗಳು ಮೂಲಭೂತವಾದಿತನವನ್ನು ಮೈಗೂಡಿಸಿಕೊಂಡಿದ್ದಾರೆ. ನಾಳೆ ವಿವಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟು ವರ್ಷ ನಾಡು ಕಟ್ಟುವ ಕೆಲಸ ಮಾಡಿರುವ ಬರಗೂರು ರಾಮಚಂದ್ರಪ್ಪ ಅವರು, ಇಂತಹ ಕೋಮುವಾದಿ, ಜಾತಿವಾದಿ ಹಾಗೂ ಮೂಲಭೂತವಾದಿಯಾಗಿರುವ ಕುವೆಂಪು ವಿವಿ ಉಪಕುಲಪತಿ ಶರತ್ ಅನಂತ್‌ಮೂರ್ತಿ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳಬಾರದು. ಅವರು ಕಾರ್ಯಕ್ರಮಕ್ಕೆ ಬರಬಾರದು ಎಂದು ನಾನು ಮನವಿ ಮಾಡುತ್ತಿದ್ದೇನೆ ಎಂದರು.
ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಏಕೆಂದರೆ, ನನ್ನದು ‘ಮಾನವ ಜಾತಿ’ ಎಂದು ಕುವೆಂಪು ಹೇಳಿದ್ದರು. ಯಾವುದೇ ಧರ್ಮಗ್ರಂಥ ಪೂಜನೀಯ ಆಗಬಾರದು ಎಂದು ಹೇಳಿದ್ದರು. ಅವರ ಹೆಸರಿನ ವಿಶ್ವವಿದ್ಯಾಲಯದೊಳಗೆ ಸನಾತನಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ನಡೆಯಬಾರದಿತ್ತು. ಅಂಬೇಡ್ಕರ್ ಮತ್ತು ಕುವೆಂಪು ಅವರೂ ಸಹ ಸನಾತನ ಧರ್ಮವನ್ನು ವಿರೋಧಿಸಿದ್ದರು. ಇಷ್ಟೆಲ್ಲಾ ಇರುವಾಗ ಆರ್‌ಎಸ್‌ಎಸ್ ವಿಚಾರವನ್ನು ಮುನ್ನೆಲೆಗೆ ತರುವುದು ಸರಿಯಲ್ಲ. ವಿಶ್ವವಿದ್ಯಾಲಯದ ಯಾವುದೇ ವಿದ್ವಾಂಸರಿಲ್ಲದೇ, ಕದ್ದುಮುಚ್ಚಿ ಕಾರ್ಯಕ್ರಮ ಮಾಡುತ್ತಿರುವುದು ಯಾಕೆ? ವಿವಿ ಆವರಣಕ್ಕೆ ಪೊಲೀಸ್ ಸರ್ಪಗಾವಲು ಹಾಕಿ ಕಾರ್ಯಕ್ರಮ ಮಾಡುವ ಮೂಲಕ ಉಪ ಕುಲಪತಿಗಳು ಕುವೆಂಪು ಆಶಯಗಳಿಗೆ ವಿರುದ್ಧವಾಗಿ ನಿಂತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.