ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ, ಬೇರೆಡೆಗೆ ಕಳುಹಿಸಬೇಡಿ. ಔಷಧಿಗಳನ್ನು ಬರೆದು ಕೊಡಬೇಡಿ. ನಿಮಗೇನಾದರೂ ಕೊರತೆ ಇದ್ದರೆ ಹೇಳಿ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸಭೆ ನಡೆಸಿ ಮಾತನಾಡಿದರು. ನಮ್ಮ ಆಸ್ಪತ್ರೆಗೆ ಅತ್ಯುತ್ತಮ ಆಸ್ಪತ್ರೆ ಎಂದು ಪ್ರಶಸ್ತಿ ಬಂದಿದೆ, ಈಗ ಅನೇಕರು ಹೊಸಬರು ಬಂದಿದ್ದೀರಿ. ಉತ್ತಮವಾಗಿ ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿಕೊಂಡು ಹೋಗಿ ಎಂದು ಹೇಳಿದ ಶಾಸಕರು, ವೈದ್ಯಾಧಿಕಾರಿ ನಾಗೇಂದ್ರ ಅವರಿಂದ ಮಾಹಿತಿ ಪಡೆದು ಕೊರತೆ ಇರುವ ವೈದ್ಯರು, ದಾದಿಯರು, ಸಿಬ್ಬಂದಿ ವಿವರ ಪಡೆದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ ೧೫೦ ರಿಂದ ೧೬೦ ಹೆರಿಗೆಗಳು ನಡೆಯುತ್ತಿವೆ, ಒಬ್ಬರೇ ಸ್ತ್ರೀ ರೋಗ ತಜ್ಞರು ಇದ್ದು ಅವರಿಗೆ ಹೆಚ್ಚು ಹೊರೆ ಆಗುತ್ತಿದೆ ಹಾಗೂ ಇಬ್ಬರು ಸ್ತ್ರೀ ರೋಗ ತಜ್ಞರ ಹುದ್ದೆ ಖಾಲಿ ಇದ್ದು ತಕ್ಷಣ ಭರ್ತಿ ಮಾಡಿಸುವುದೂ ಸೇರಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದರು.ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ವೈದ್ಯರ ಜೊತೆಗೆ ಒಬ್ಬೊಬ್ಬರು ಸಿಬ್ಬಂದಿಯನ್ನು ನೀಡಿ, ಮಹಿಳಾ ವೈದ್ಯರಿಗೆ ಮಹಿಳಾ ಸಿಬ್ಬಂದಿಯನ್ನು, ಪುರುಷ ವೈದ್ಯರಿಗೆ ಪುರುಷ ಸಿಬ್ಬಂದಿಯನ್ನು ನೀಡಿ. ಯಾವ ವೈದ್ಯರು ಯಾವ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಾರೋ ಅವರನ್ನು ನೇಮಿಸಿಕೊಳ್ಳಲಿ. ಇದನ್ನು ಅದೇಶ ಮಾಡಿ ಆದೇಶ ಪ್ರತಿಯನ್ನು ನೀಡಿ ಎಂದು ಆಡಳಿತ ವೈದ್ಯಾಧಿಕಾರಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ವೈಜ್ಞಾನಿಕವಾದ ಲಾಂಡ್ರಿ, ಅಗತ್ಯಕ್ಕೆ ತಕ್ಕ ಸಲಕರಣೆಗಳನ್ನು ಒದಗಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಭಾಂಗಣದಿಂದಲೇ ಕರೆ ಮಾಡಿ ಮನವಿ ಮಾಡಿದರು. ಆಸ್ಪತ್ರೆಗೆ ಯಾವುದೇ ಸೌಲಭ್ಯ- ಸಲಕರಣೆಗಳು ಬೇಕಾದಲ್ಲಿ ಅದನ್ನು ವಿವರವಾಗಿ ಬರೆದುಕೊಡಿ, ಒದಗಿಸಿಕೊಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಶಸ್ತ್ರ ಚಕಿತ್ಸಕಿ ಡಾ. ಮಂಜುಳಾರನ್ನು ಸನ್ಮಾನಿಸಿದರು. ಸಭೆಯಲ್ಲಿ ಡಾ. ನಟರಾಜ್, ಡಾ. ರಮೇಶ್, ಡಾ. ವಿನಯ್, ಡಾ. ಪೂರ್ಣಿಮಾ, ಡಾ. ಕುಸುಮಾ, ಡಾ. ಅಜಯ್, ಡಾ. ಸತ್ಯಪ್ರಕಾಶ್, ಡಾ.ಅಶ್ವಥ್, ಡಾ.ಲೋಕೇಶ್, ಡಾ ದಿನೇಶ್, ಡಾ. ಶ್ರೇಯಾ, ಡಾ. ಕಿರಣ್‌ಕುಮಾರ್, ಡಾ. ನಾಗಕನ್ಯ, ಡಾ. ಮುರುಗೇಶ್, ಡಾ. ಮಲ್ಲರಾಜು, ಡಾ. ಭುಶ್ರಾ, ಡಾ. ಭವ್ಯ ಇದ್ದರು.