ರಾಜ್ಯೋತ್ಸವ ಹಿರಿಯರಿಗೆ ಸಲ್ಲಿಸುವ ಋಣ ಸಂದಾಯ: ಚಿಂತಕ ಪ್ರೊ. ರಾಜೇಂದ್ರ ಚೆನ್ನಿ

KannadaprabhaNewsNetwork |  
Published : Nov 19, 2025, 12:30 AM IST
ಪೊಟೋ: 18ಎಸ್‌ಎಂಜಿಕೆಪಿ06ಶಿವಮೊಗ್ಗದ ಬಾಪೂಜಿನಗರ ಕಾಲೇಜಿನ ಕನ್ನಡ ವಿಭಾಗ ಮತ್ತು ಕುವೆಂಪು ವಿಶ್ವವಿದ್ಯಾಲಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ಸಾಹಿತ್ಯ: ಸಂಸ್ಕೃತಿ ಮತ್ತು ಸಂವೇದನೆ ವಿಚಾರದ ಕಾರ್ಯಾಗಾರವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯಕ್ಕೆ ದೊರೆಗಳ ಬೆಂಬಲ ಕಳೆದ ಮೇಲೆ ಜನಸಾಮಾನ್ಯರು ಅದನ್ನು ಕಟ್ಟಿ ಬೆಳೆಸಿದರು. ಹಿರಿಯರು ಕಟ್ಟಿದ ಕನ್ನಡ ನಾಡು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯೋತ್ಸವವು ಹಿರಿಯರಿಗೆ ಸಲ್ಲಿಸುವ ಋಣ ಸಂದಾಯವಾಗಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ಸಾಹಿತ್ಯಕ್ಕೆ ದೊರೆಗಳ ಬೆಂಬಲ ಕಳೆದ ಮೇಲೆ ಜನಸಾಮಾನ್ಯರು ಅದನ್ನು ಕಟ್ಟಿ ಬೆಳೆಸಿದರು. ಹಿರಿಯರು ಕಟ್ಟಿದ ಕನ್ನಡ ನಾಡು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯೋತ್ಸವವು ಹಿರಿಯರಿಗೆ ಸಲ್ಲಿಸುವ ಋಣ ಸಂದಾಯವಾಗಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ನಗರದ ಬಾಪೂಜಿನಗರ ಕಾಲೇಜಿನ ಕನ್ನಡ ವಿಭಾಗ ಮತ್ತು ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ಸಾಹಿತ್ಯ; ಸಂಸ್ಕೃತಿ ಮತ್ತು ಸಂವೇದನೆ ವಿಚಾರದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅದರೊಳಗೆ ಬೌದ್ಧ, ಜೈನ, ವೈಷ್ಣವ ಪರಂಪರೆಗಳ ಪ್ರಭಾವ ಇದೆ. ಈ ದೇಶಕ್ಕೆ ಸಮಾನತೆಯ ನೆಲೆಗಳನ್ನು ಕಲ್ಪಿಸಿಕೊಟ್ಟಿದ್ದು ಕನ್ನಡ ನಾಡು. 1956 ಕ್ಕಿಂತ ಮುಂಚೆ ಸುಮಾರು 29 ಭಾಗಗಳಲ್ಲಿ ಹಂಚಿಹೋಗಿದ್ದ ಈ ನಾಡನ್ನು ಭಾಷಿಕ ನೆಲೆಯಲ್ಲಿ ಒಗ್ಗೂಡಿಸಿದರು. ಧಾರವಾಡದಂತಹ ಪ್ರದೇಶದಲ್ಲಿ ರಸೆಲ್ ನಂತಹ ಅಧಿಕಾರಿಗಳ ಕನ್ನಡ ಸೇವೆ ಗಮನಾರ್ಹವಾದುದು ಎಂದರು.

ಕನ್ನಡ ಅನ್ನ ಭಾಷೆಯಲ್ಲ, ಇಂಗ್ಲಿಷ್ ಮಾತ್ರ ಮೋಕ್ಷ ಎನ್ನುವ ಭ್ರಮೆಯಿಂದ ಹೊರಬರಬೇಕು. ಕನ್ನಡಕ್ಕೆ ಉದ್ಯೋಗ ಸೃಷ್ಟಿಸುವ ಪ್ರಾಧಾನ್ಯತೆ ಕೊಡಬೇಕು. ಭಾಷೆಯ ಕಲಿಕೆಗೂ ಮಾಧ್ಯಮಕ್ಕೂ ಸಂಬಂಧ ಇಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರೆಲ್ಲಾ ಬದುಕಿದ್ದು, ಬರೆದದ್ದು ಹೆಚ್ಚು ಮಾತೃಭಾಷೆಯಲ್ಲಿಯೇ ಹಾಗೂ ಮಗುವಿನ ಜ್ಞಾನ ವಿಸ್ತಾರವಾಗುವುದು ಕೂಡ ಮಾತೃಭಾಷೆಯ ಮೂಲಕ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್. ಮಳೀಮಠ್, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ನಡುವೆ ಅವಿನಾಭಾವ ಸಂಬಂಧ ಇದೆ. ಸಾಹಿತ್ಯವು ಜನ ಸಂವೇದನೆಗಳನ್ನು ಪ್ರಧಾನಧಾರೆಯಲ್ಲಿ ತಂದಿದೆ. ಸಮಾಜದ ಆಶೋತ್ತರಗಳ ಜೊತೆಗೆ ಹೊಣೆಗಾರಿಕೆಯನ್ನು, ಸಮಸಮಾಜದ ಆಶಯಗಳನ್ನು ಇಟ್ಟುಕೊಂಡು ನಡೆದಿದೆ. ವರ್ತಮಾನದ ಅನೇಕ ತಲ್ಲಣಗಳಿಗೆ ಸ್ಪಂದಿಸುವ ಗುಣ ಸಾಹಿತ್ಯಕ್ಕೆ ಮಾತ್ರ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಸ್ ಶಶಿಧರ ಮಾತನಾಡಿ, ಸಿನಿಮಾದಲ್ಲಿನ ಪ್ರಚಾರ ಜನಪದ ಕ್ಷೇತ್ರದಲ್ಲಿ ಇಲ್ಲ. ಈಗಿನ ಯುವಜನತೆ ಇಂತಹ ಅಪರೂಪದ ಕಲಾ ಪ್ರಕಾರಗಳೊಂದಿಗೆ ಮುಖಾಮುಖಿಯಾಗಬೇಕು. ಸಾಹಿತ್ಯ ನಮ್ಮ ವಿವೇಚನೆಗಳನ್ನು ಹೆಚ್ಚಿಸಿ ಸಂವೇದನೆ ಮೂಡಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಖ್ಯಾತ ಜನಪದ ಕಲಾವಿದರಾದ ಗುಡ್ಡಪ್ಪ ಜೋಗಿ ಮತ್ತು ತಂಡ ಜೋಗಿ ಜನಪದ ವೈಭವ ನಡೆಸಿಕೊಟ್ಟರು. ಐ.ಕ್ಯು.ಎ.ಸಿ ಸಂಚಾಲಕರಾದ ಡಾ. ವಿದ್ಯಾ ಮರಿಯ ಜೋಸೆಫ್, ಕನ್ನಡ ವಿಭಾಗದ ಮುಖ್ಯಸ್ಥರಾದ ರವಿ. ಎನ್, ಡಾ. ಎಂ.ಎಂ.ಮಂಜುನಾಥ, ಡಾ. ಚಿಕ್ಕ ಹೆಗಡೆ, ಕೆ.ಪಿ ಪವಿತ್ರ, ಡಾ. ಸತೀಶ್, ಶ್ವೇತ ಉಪಸ್ಥಿತರಿದ್ದರು. ಗೀತ ನಿರೂಪಿಸಿ, ಸಿಂಧು ಪ್ರಾರ್ಥಿಸಿ, ಪುಣ್ಯ ಮತ್ತು ತಂಡ ನಾಡಗೀತೆ ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ