ನಾರಾಯಣ ಹೆಗಡೆ
ಕಳೆದ ಒಂದು ತಿಂಗಳಿಂದ ಮಳಿ, ಹೊಳಿ ಬಂದು ಕೂಲಿನೂ ಸಿಗವಲ್ದು. ಖಾತ್ರಿ ಯೋಜನೆದಾಗ ಕೆಲಸ ಮಾಡಿ ಒಂದೂವರೆ ತಿಂಗ್ಳಾದ್ರು ಹಣ ಹಾಕವಲ್ರು. ಒಂದ್ ಹೊತ್ತು ರೊಟ್ಟಿಗೂ ಗತಿ ಇಲ್ಲದಂಗಾಗೈತ್ರಿ...
ಇದು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಅಳಲು.ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಬರೋಬ್ಬರಿ 16.85 ಕೋಟಿ ರು. ಬಾಕಿಯಿದೆ. ಕೂಲಿ ಹಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳ ಕಾರ್ಮಿಕರು ನಿತ್ಯವೂ ತಮ್ಮ ಕೂಲಿ ಹಣದ ಬರುವಿಕೆಗಾಗಿಯೇ ಕಾಯುತ್ತ ಕುಳಿತುಕೊಳ್ಳುವಂತಾಗಿದೆ.
ಮಳೆಯಲ್ಲಿ ಕೆಲಸವೂ ಇಲ್ಲ:ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಉದ್ಯೋಗ ಖಾತ್ರಿ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದೆ. ಜತೆಗೆ, ಅತಿಯಾದ ಮಳೆಯಿಂದ ಕೃಷಿ ಸೇರಿದಂತೆ ಬಹುತೇಕ ಎಲ್ಲ ಕಾಮಗಾರಿ ಬಂದ್ ಆಗಿದ್ದರಿಂದ ಸ್ಥಳೀಯವಾಗಿ ಕಾರ್ಮಿಕರ ಕೈಗೆ ಕೆಲಸವೇ ಇಲ್ಲದಂತಾಗಿದೆ. ಹೊಲಗದ್ದೆ ಇದ್ದವರು ಬಿತ್ತನೆ ಮಾಡಿ ಅವರದೇ ಕೆಲಸವನ್ನಾದರೂ ಮಾಡಿಕೊಳ್ಳುತ್ತಾರೆ, ಆದರೆ, ನಮ್ಮಂಥ ಬಡವರಿಗೆ ಹೊಲವೂ ಇಲ್ಲ. ಕೂಲಿಯನ್ನೇ ನಂಬಿ ಬಂದಿರುವ ನಮ್ಮಂಥವರಿಗೆ ಕೆಲಸವೇ ಸಿಗುತ್ತಿಲ್ಲ. ಇದರಿಂದ ಬಹಳ ತೊಂದರೆಯಾಗಿದೆ. ಖಾತ್ರಿ ಯೋಜನೆಯಲ್ಲಿ ನಾವು ಮಾಡಿದ ಕೆಲಸದ ಹಣವನ್ನಾದರೂ ನೀಡಿದರೆ ಸ್ವಲ್ಪ ದಿನ ಜೀವನ ನಿರ್ವಹಣೆಗೆ ಅನುಕೂಲವಾಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಬರುತ್ತೆ ಎಂದು ಹೇಳುತ್ತಲೇ ಇದ್ದಾರೆ ಎಂದು ಖಾತ್ರಿ ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮಳೆಯಿಂದ ಬೇರೆ ಕೆಲಸವೂ ಸಿಗುತ್ತಿಲ್ಲ. ಈಗ ಬೇರೆ ಹಬ್ಬಗಳು ಬರುತ್ತಿವೆ. ಏನು ಮಾಡಬೇಕು ಎಂಬುದು ಕಾರ್ಮಿಕರಿಗೆ ಗೊತ್ತಾಗದಂತಾಗಿದೆ. ಆದಷ್ಟು ಬೇಗ ಕೂಲಿ ಹಣ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಕಾರ್ಮಿಕ ಸಂಘಟನೆ ಮುಖಂಡ ಎಸ್.ಡಿ. ಬಳಿಗಾರ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕಳೆದ ಜೂನ್ ಅಂತ್ಯದವರೆಗಿನ ಹಣ ಪಾವತಿಯಾಗಿದೆ. ಆ ಬಳಿಕದ ಕೈಗೊಂಡ ಕಾಮಗಾರಿಗೆ ಸಂಬಂಧಿಸಿದಂತೆ 16.85 ಕೋಟಿ ರು. ಬಾಕಿಯಿದೆ. ಇದನ್ನುಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗ ಕಾರ್ಮಿಕರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ್ ಹೇಳಿದ್ದಾರೆ.