ಪ್ರಹ್ಲಾದ ಗುಡಿ
ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 332ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕೇವಲ 4 ಜನ ಉಪನ್ಯಾಸಕರು ಪಾಠ ಬೋಧನೆಗೆ ದಿನವೂ ಹರಸಾಹಸ ಪಡುತ್ತಿದ್ದಾರೆ.
2025-26ನೇ ಸಾಲಿನಲ್ಲಿ ಈ ಕಾಲೇಜಿನ ವಿವಿಧ ವಿಭಾಗದ ದ್ವಿತೀಯ ಪಿಯಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಪಾಸಾದ ಹಿನ್ನೆಲೆಯಲ್ಲಿ, ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾವಕಾಶ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನ್ಯಾಸಕರನ್ನು ನೇಮಕ ಮಾಡದೇ ಇರುವುದರಿಂದ ಪಠ್ಯ ಹಾಗೂ ಲ್ಯಾಬ್ (ಪ್ರಯೋಗಾಲಯ) ಚಟುವಟಿಕೆಗಳನ್ನು ನಿಗದಿಯಂತೆ ಕೈಗೊಳ್ಳಲು ಉಪನ್ಯಾಸಕರಿಗೆ ಹೊರೆಯಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.ಬಡ ವಿದ್ಯಾರ್ಥಿಗಳಿಗೆ ಆಧಾರಸ್ತಂಭ: ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಿ ಅಭ್ಯಾಸ ಮಾಡಲಾಗದ ಬಡ ಮತ್ತು ಮಧ್ಯಮ ವರ್ಗದ ಬಹಳಷ್ಟು ವಿದ್ಯಾರ್ಥಿಗಳಿಗೆ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ ಆಧಾರಸ್ತಂಭವಾಗಿದೆ. ಆದರೆ ಈ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಿದೆ.
ವಿಜ್ಞಾನ ವಿಭಾಗದ ಉಪನ್ಯಾಸಕರ ನೇಮಕಾತಿ ಅವಶ್ಯಕ
“ಕಲಾ ವಿಭಾಗಕ್ಕೆ ಒಬ್ಬರೇ ಸಮಾಜಶಾಸ್ತç ಉಪನ್ಯಾಸಕರಿದ್ದು, ಆದರೆ ಅವರನ್ನೂ ಸಹ 3 ದಿನ ಅಂಬಾಮಠದ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಲಾಗಿದೆ. ಇದರಿಂದ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 120 ವಿದ್ಯಾರ್ಥಿಗಳಿದ್ದು, ಅವರಿಗೆ ಪಾಠ ಬೋಧನೆ ಜೊತೆಗೆ ಗ್ರಾಮೀಣ ಪ್ರದೇಶದ ಇನ್ನೊಂದು ಕಾಲೇಜಿಗೆ ಬೋಧಿಸಲು ಉಪನ್ಯಾಸಕರು ಅಲೆದಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಮಸ್ಯೆಯಾಗಿದೆ. ಹಾಗಾಗಿ ಸಮಾಜಶಾಸ್ತç ಉಪನ್ಯಾಸಕರನ್ನು ಪ್ರಸ್ತುತ ಕಾಲೇಜಿನಲ್ಲೇ ಉಳಿಸಿ, ಅಂಬಾಮಠ ಕಾಲೇಜಿಗೆ ಬೇರೊಬ್ಬ ಅತಿಥಿ ಉಪನ್ಯಾಸಕರನ್ನು ನೇಮಿಸಿ ಸಮಸ್ಯೆ ಪರಿಹರಿಸಬೇಕೆಂದು ವಿದ್ಯಾರ್ಥಿ ಪಾಲಕರು” ಮನವಿ ಮಾಡಿದ್ದಾರೆ.
ಜನಪ್ರತಿನಿಧಿಗಳು ಗಮನಹರಿಸಲಿ