ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್ ಮತ್ತು ಯೂನಿವರ್ಸಲ್ ನಾಲೆಡ್ಜ್ ಸಹಯೋಗದಲ್ಲಿ ಮಂಗಳವಾರ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ನಡೆದ 59ನೇ ಉಚಿತ ಅನ್ನದಾನ ಕಾರ್ಯಕ್ರಮದಲ್ಲಿ ಕೃಷಿಕರು, ಕಾಂಡಿಮೆಂಟ್ಸ್ ವ್ಯಾಪಾರಿಗಳೂ ಆದ ಎಸ್.ಸುಬ್ರಹ್ಮಣ್ಯ ಇವರ 60ನೇ ಜನ್ಮದಿನ ಪ್ರಯುಕ್ತ ಸಿಹಿಯೂಟ ವಿತರಣಾ ಸೇವೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಅನ್ನದ ಒಂದು ಅಗುಳಿನ ಉಳಿತಾಯ ನೂರು ಅಗುಳಿನ ಉತ್ಪಾದನೆಗಿಂತಲೂ ಮಹತ್ವದ್ದು ಎಂಬುದನ್ನು ಎಲ್ಲರೂ ಅರಿಯಬೇಕು. ನಾಲ್ಕು ಅಗುಳು ಕಡಿಮೆ ತಿಂದರೂ ಪರವಾಗಿಲ್ಲ, ಹತ್ತು ಅಗುಳು ಹಾಳಾಗದಂತೆ ನೋಡಿಕೊಳ್ಳಬೇಕು. ಆಹಾರವನ್ನು ವ್ಯರ್ಥ ಮಾಡಬಾರದು ಎಂದರು.
ಅತ್ಯಂತ ಶ್ರೇಷ್ಠ ದಾನಗಳಲ್ಲಿ ಅನ್ನದಾನ ಸಹ ಒಂದು. ಮನುಷ್ಯನಿಗೆ ಧನ, ಕನಕ, ಆಸ್ತಿ ಅಥವಾ ಮತ್ತಿನ್ಯಾವ ಸಂಪತ್ತನ್ನು ದಾನವಾಗಿ ನೀಡಿದರೂ ಸಂತೃಪ್ತಿ ಪಡಿಸಲು ಸಾಧ್ಯವಿಲ್ಲ. ಇನ್ನಷ್ಟು ಬೇಕು, ಮತ್ತಷ್ಟು ಸಿಕ್ಕಿದ್ದರೆ ಚೆನ್ನಾಗಿತ್ತು ಎಂಬ ಲಾಲಸೆ ಸಹಜ. ಆದರೆ ಹಸಿದವನಿಗೆ ಅನ್ನವನ್ನು ಹೊಟ್ಟೆ ತುಂಬಾ ನೀಡಿದರೆ ಆತ ಸಂತೃಪ್ತನಾಗುತ್ತಾನೆ. ಹೊಟ್ಟೆ ತುಂಬಿದ ನಂತರ ತಿನ್ನಲು ಮತ್ತಷ್ಟು ಅನ್ನ ನೀಡಿದರೂ ಆತ ಅದನ್ನು ಸೇವಿಸುವುದಿಲ್ಲ ಎಂದು ತಿಳಿಸಿದರು.ಅನ್ನವನ್ನು ತಿನ್ನುವ ಹಕ್ಕಿದೆಯೇ ವಿನಾ ಅದನ್ನು ಬಿಸಾಡುವ ಹಕ್ಕಿಲ್ಲ. ನಾವು ತಿನ್ನುವ ಪ್ರತಿಯೊಂದು ಅಗುಳಿನ ಮೇಲೂ ಅದನ್ನು ತಿನ್ನುವವನ ಹೆಸರು ಬರೆದಿರುತ್ತದೆ ಎಂಬ ಮಾತು ಜನಜನಿತ. ಸಮಾರಂಭಗಳಲ್ಲಿ ಮನುಷ್ಯನ ಹೊಟ್ಟೆ ಸೇರಬೇಕಾದ ಅನ್ನ ಸ್ವೇಚ್ಛಾಚಾರ, ಆಡಂಬರ, ತೋರ್ಪಡಿಕೆಯಿಂದಾಗಿ ಕಸದ ಬುಟ್ಟಿ ಸೇರುತ್ತಿದೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಮೂನ್ನೂರಕ್ಕೂ ಹೆಚ್ಚು ಮಂದಿಗೆ ಊಟ ವಿತರಿಸಲಾಯಿತು. ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನವ್ಯಶ್ರೀ ನಾಗೇಶ್, ನಾಗರಾಜ್ ಶೆಟ್ಟರ್, ಎಸ್.ಸುಬ್ರಹ್ಮಣ್ಯ , ಜ್ಯೋತಿ, ಪಿ.ಪ್ರದೀಪ್ , ದಿನೇಶ್ ಬಾಬು, ಎಂ.ಕೆ.ಬಾಲಚಂದ್ರ, ಮನೋಹರ ವಿಜಾಪುರ ಮತ್ತಿತರರು ಭಾಗವಹಿಸಿದ್ದರು.