ವಿದ್ಯೆಯಿಂದ ಮಾತ್ರ ಸಮುದಾಯ ಏಳಿಗೆ ಹೊಂದಲು ಸಾಧ್ಯ: ಡಾ.ಎಸ್.ರಾಮಪ್ಪ

KannadaprabhaNewsNetwork |  
Published : Mar 06, 2026, 01:45 AM IST
ಪೊಟೋ: 05ಎಸ್‌ಎಂಜಿಕೆಪಿ07ಶಿವಮೊಗ್ಗದ ಬಾಪೂಜಿ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಈಡಿಗ ಸಮುದಾಯದ ಬಾಲಕರ ವಿದ್ಯಾರ್ಥಿನಿಲಯದ ಹೆಚ್ಚುವರಿ ಕಟ್ಟಡಕ್ಕೆ ಶ್ರೀ ಕ್ಷೇತ  ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಶಂಕುಸ್ಥಾಪನೆ ನೆರವೇರಿಸಿದರು.  | Kannada Prabha

ಸಾರಾಂಶ

ಯಾವುದೇ ಸಮುದಾಯ ವಿದ್ಯೆಯಿಂದ ಮಾತ್ರ ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ಹಾಸ್ಟೆಲ್ ನಿರ್ಮಾಣ ಮಾಡುವುದು ಧರ್ಮದ ಕೆಲಸ ಇದರಿಂದ ಮಕ್ಕಳ ಭವಿಷ್ಯ ಕಟ್ಟುವ ಕೆಲಸ ಆಗುತ್ತದೆ ಎಂದು ಶ್ರೀ ಕ್ಷೇತ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯಾವುದೇ ಸಮುದಾಯ ವಿದ್ಯೆಯಿಂದ ಮಾತ್ರ ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ಹಾಸ್ಟೆಲ್ ನಿರ್ಮಾಣ ಮಾಡುವುದು ಧರ್ಮದ ಕೆಲಸ ಇದರಿಂದ ಮಕ್ಕಳ ಭವಿಷ್ಯ ಕಟ್ಟುವ ಕೆಲಸ ಆಗುತ್ತದೆ ಎಂದು ಶ್ರೀ ಕ್ಷೇತ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಹೇಳಿದರು.

ಇಲ್ಲಿನ ಬಾಪೂಜಿ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಈಡಿಗ ಸಮುದಾಯದ ಬಾಲಕರ ವಿದ್ಯಾರ್ಥಿನಿಲಯದ ಹೆಚ್ಚುವರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈಡಿಗ ಸಮುದಾಯ ಮಲೆನಾಡಿನ ಹಳ್ಳಿಗಾಡಿನಲ್ಲಿ ಹೆಚ್ಚಾಗಿ ವಾಸಿಸುತ್ತಿದೆ. ಬಹುಸಂಖ್ಯಾತರಾದ ಈ ಸಮುದಾಯದ ಮಕ್ಕಳಿಗೆ ಎಲ್ಲರಿಗೂ ಸರ್ಕಾರಿ ಹಾಸ್ಟೆಲ್ ಸಿಗುವುದು ಕಷ್ಟ. ಈಗ ಹೆಚ್ಚಿನ ವಿದ್ಯಾರ್ಥಿನಿಲಯಗಳು ಹೆಚ್ಚಿದ್ದರೂ, ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿರುವ ಈಡಿಗ ಹಾಸ್ಟೆಲ್‌ನಲ್ಲಿದ್ದುಕೊಂಡು ಹೆಚ್ಚಿನ ಶಿಕ್ಷಣ ಪಡೆಯುವ ಅವಕಾಶ ಇದೆ. ಈಡಿಗರ ಸಂಘದಿಂದ ಮಾತ್ರ ಎಲ್ಲವೂ ಸಾಧ್ಯವಾಗದು. ಸಮಾಜದ ಸ್ಥಿತಿವಂತರು ಹಾಸ್ಟೆಲ್ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಎಲ್ಲರೂ ಕೂಡಿ ಹೆಚ್ಚುವರಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿ ನಮ್ಮ ಮಕ್ಕಳಿಗೆ ಅನುಕೂಲ ಮಾಡಿಕೊಡೋಣ ಎಂದರು.

ಶಿವಮೊಗ್ಗ ಶಾಸಕ ಎಸ್.ಎನ್.ಚೆನ್ನಬಸಪ್ಪ ಮಾತನಾಡಿ, ಈಡಿಗರ ಸಂಘದ ಹಾಸ್ಟೆಲ್ ನಿರ್ಮಾಣ ಕೆಲಸ ಉತ್ತಮವಾದುದಾಗಿದೆ. ಈಗಾಗಲೇ ಭರವಸೆ ನೀಡಿದಂತೆ ನಾನು ನೆರವು ನೀಡುವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಯಾವುದೇ ಸಮುದಾಯ ಹೊಂದಿರುವ ಶಿಕ್ಷಣದ ಮೇಲೆ ಅದರ ಅಭಿವೃದ್ಧಿಯ ಸೂಚ್ಯಂಕ ನಿರ್ಧಾರವಾಗುತ್ತದೆ. ಜಿಲ್ಲೆಯ ಪ್ರಭಾವಿ ಸಮುದಾಯವಾದ ಈಡಿಗರೊಂದಿಗೆ ನನಗೆ ಹೆಚ್ಚಿನ ಸಂಪರ್ಕ ಇದೆ. ಈ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಹೊಸನಗರ ಹಾಗೂ ತೀರ್ಥಹಳ್ಳಿಯ ಸಂಘದ ಸಮುದಾಯ ಭವನಕ್ಕೆ ನೆರವು ನೀಡಿದ್ದೇನೆ. ಮುಂದೆಯೂ ಸಂಘದೊಂದಿಗೆ ಇರುತ್ತೇನೆ. ಈ ಹಾಸ್ಟೆಲ್ ಕಟ್ಟಡಕ್ಕೂ ನೆರವು ನೀಡುವೆ ಎಂದು ಭರವಸೆ ನೀಡಿದರು.

ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈಡಿಗ ಸಂಘದ ಗೌರವ ಅಧ್ಯಕ್ಷನಾಗಿ ನಗರದಲ್ಲಿ ಸುಸಜ್ಜಿತ ಈಡಿಗ ಭವನ ನಿರ್ಮಾಣಕ್ಕೆ ಶ್ರಮಿಸಿದ್ದೇವೆ. ನಿವೇಶನ ಮತ್ತು ಅನುದಾನ ತರುವಲ್ಲಿ ಸಂಘದ ನಿರ್ದೇಶಕರುಗಳೊಂದಿಗೆ ಕೆಲಸ ಮಾಡಿದ್ದೇನೆ. ಈಗ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕೆ ಸರಕಾರದ ಕಡೆಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಾನು ಸೇರಿ ಒಂದು ಕೋಟಿ ರು. ಅನುದಾನ ತರುತ್ತೇವೆ ಎಂದರು.

ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ನಮ್ಮ ಸಮುದಾಯದ ಎಲ್ಲಾ ಜನ ಪ್ರತಿನಿಧಿಗಳು ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸ್ಥಳೀಯ ಶಾಸಕರು, ಸಂಸದರು ಕೂಡಾ ನೆರವು ನೀಡುವ ಮಾತು ನೀಡಿದ್ದಾರೆ. ಸಿಗಂದೂರು ಧರ್ಮದರ್ಶಿಗಳು, ಬಂಗಾರಪ್ಪರ ಕುಟುಂಬ, ಜಾಲಪ್ಪ, ಜೆಪಿಎನ್ ಎಲ್ಲರ ಸಹಕಾರದಿಂದ ಈಡಿಗರ ಭವನ ನಿರ್ಮಾಣವಾಗಿದೆ. ಅದಕ್ಕೆ ಸಮಾಜದ ಅನೇಕರು ನೆರವು ನೀಡಿದ್ದರು. ಈಗಲೂ ಸಮಾಜದವರು ಕೈ ಹಿಡಿಯಬೇಕು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಸ್ವಾಗತಿಸಿದರು. ಕುಮಾರಿ ಈಶಾನ್ವಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕಮವನ್ನು ಜಿ.ಡಿ.ಮಂಜುನಾಥ ನಿರೂಪಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಖಜಾಂಚಿ ಕಾಗೋಡು ರಾಮಪ್ಪ ಮತ್ತಿತರರಿದ್ದರು. ಕಾರ್ಯಕ್ರಮಕ್ಕೆ ಮಹಿಳಾ ಈಡಿಗ ಸಂಘ, ತಾಲೂಕು ಈಡಿಗ ಸಂಘಗಳ ಅಧ್ಯಕ್ಷರು, ಪ್ರತಿನಿಧಿಗಳು ಆಗಮಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿನ್ನೇನಹಳ್ಳಿ ಸೊಸೈಟಿಗೆ ಯುವ ನಾಯಕರ ಆಯ್ಕೆ
ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲ