ತೀರ್ಥಹಳ್ಳಿ: ವಿಶ್ವಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಮುಂದಿನ ಪೀಳಿಗೆಯನ್ನು ವಿಶ್ವ ಮಾನವರನ್ನಾಗಿ ರೂಪಿಸುವಲ್ಲಿ ಕುವೆಂಪು ಮುಂತಾದ ದಾರ್ಶನಿಕರ ಕಾರ್ಯಕ್ರಮಗಳು ಹೆಚ್ಚು ವಿಸ್ತಾರವಾಗಿ ನಡೆಯುವಂತಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನಾಚರಣೆಯ ಅಂಗವಾಗಿ ಕುಪ್ಪಳಿಯ ಹೇಮಾಂಗಣದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯನ್ನು ಉದ್ಘಾಟಿಸಿ, ಕೊಂಕಣಿ ಸಾಹಿತಿ ಮಹಾಬಲೇಶ್ವರ ಸೈಲ್‍ರವರಿಗೆ 2025ನೇ ಸಾಲಿನ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಪ್ರತಿಷ್ಠಾನದಿಂದ ಈವರೆಗೆ ಇಂಗ್ಲಿಷ್ ಮತ್ತು ಕೊಂಕಣಿ ಸಾಹಿತ್ಯವನ್ನು ಹೊರತು ಪಡಿಸಿ ದೇಶದ ಬಹುತೇಕ ಎಲ್ಲ ಭಾಷಾ ಸಾಹಿತಿಗಳಿಗೂ ಪ್ರಶಸ್ತಿ ನೀಡಲಾಗಿದೆ. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾಗಿರುವ ಮಹಾಬಲೇಶ್ವರ ಸೈಲ್‍ರವರು ಮಾಡಿರುವ ಸಾಧನೆ ಅಮೋಘವಾಗಿದೆ. ಹೀಗಾಗಿ ನಾವೇ ಅಲವಡಿಸಿಕೊಂಡಿರುವ ಕುವೆಂಪು ಪ್ರಶಸ್ತಿ ನಿಯಮವನ್ನು ಮೀರಿ ಶ್ರೀಯುತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.ಕುವೆಂಪು ವಿವಿ ಕುಲಪತಿ ಡಾ.ಶರತ್ ಅನಂತಮೂರ್ತಿ ಮಾತನಾಡಿ, ಕುವೆಂಪು ರಾಷ್ಟ್ರಮಟ್ಟದಲ್ಲಿ ಆಧುನಿಕ ಕರ್ನಾಟಕದ ತಳಹದಿ ತಂದು ಕೊಟ್ಟವರು. ಇದೀಗ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯ ಮೂಲಕ ಇಡೀ ಭಾರತ ಒಂದು ಒಕ್ಕೂಟದಂತೆ ಭಾಸವಾಗುತ್ತಿರುವುದು ಕನ್ನಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜಾತಿ ವ್ಯವಸ್ಥೆಯನ್ನೇ ಗುರಾಣಿಯಾಗಿ ಬಳಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಸಾಹಿತ್ಯದ ಮೂಲಕ ಮಲೆನಾಡನ್ನು ಶಾಶ್ವತಗೊಳಿಸಿದ ಕುವೆಂಪುರವರ ಸಂದೇಶ ಪಾಲನೆ ಇಂದಿನ ಅಗತ್ಯವಾಗಿದೆ. ಕುವೆಂಪು ಸಾಹಿತ್ಯ ಮನುಕುಲಕ್ಕೇ ಮಾರ್ಗದರ್ಶಿಯೂ ಆಗಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕಿ ಕೆ.ಎಂ.ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಪ್ರತಿಷ್ಠಾನದಿಂದ ಹೊರತಂದ ಬೊಮ್ಮನಹಳ್ಳಿ ಕಿಂದರಜೋಗಿ ಕ್ಯಾಲೆಂಡರನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್‍ಬಾನು ಬಿಡುಗಡೆಗೊಳಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕವಿಶೈಲದಲ್ಲಿರುವ ಕವಿಯ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.ಸಮಾರಂಭದಲ್ಲಿ ದೇವಂಗಿ ಗ್ರಾಪಂ ಅಧ್ಯಕ್ಷೆ ಎಚ್.ಸಿ.ಸರೋಜಾ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಡಾ.ಆಂಶುಮಾನ್, ಕೇಶವ ಮಳಗಿ, ತಹಸೀಲ್ದಾರ್ ಎಸ್.ರಂಜಿತ್, ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್ ವೇದಿಕೆಯಲ್ಲಿದ್ದರು. ಟಿ.ಎನ್.ಅರವಿಂದ ಮತ್ತು ರಮಾಂಜಿ ನಾಡಗೀತೆ ಹಾಡಿದರು. ಶಿವಾನಂದ ಕರ್ಕಿ ಸ್ವಾಗತಿಸಿದರು. ಎಸ್.ದಯಾನಂದ್ ಅತಿಥಿಗಳನ್ನು ಪರಿಚಯಿಸಿದರು. ಡಾ.ರಾಜೇಂದ್ರ ಬುರುಡೀಕಟ್ಟಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಕುವೆಂಪು ಜನ್ಮದಿನದ ಅಂಗವಾಗಿ ಕುವೆಂಪು ಪ್ರತಿಷ್ಠಾನದಿಂದ ನಟಮಿತ್ರರು ಸಹಯೋಗದಲ್ಲಿ ಸೋಮವಾರ ಸಂಜೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸ್ಥಳೀಯ ರಾಜರಾಜೇಶ್ವರಿ ಮತ್ತು ಸುಮುಖ ನೃತ್ಯ ಶಾಲೆಯ ಕಲಾವಿದರಿಂದ ಕುವೆಂಪು ಗೀತೆಗಳ ನೃತ್ಯ ವೈಭವ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಳಿಯವರಿಂದ ಬೆರಳ್ಗೆ ಕೊರಳ್ ನಾಟಕವನ್ನು ಪ್ರದರ್ಶಿಸಲಾಯಿತು.