ಮುಂಡರಗಿಯಲ್ಲಿ ಬಯಲು ಬಹಿರ್ದೆಸೆ ಇನ್ನೂ ಜೀವಂತ!

KannadaprabhaNewsNetwork |  
Published : Jun 20, 2026, 02:45 AM IST
ಮುಂಡರಗಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಬಯಲು ಬಹಿರ್ದೆಸೆಗೆ ತೆರಳುತ್ತಿರುವುದು. | Kannada Prabha

ಸಾರಾಂಶ

ತಾಲೂಕಿನ 19 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 30393 ಕುಟುಂಬಗಳಿದ್ದು, ಅವುಗಳಲ್ಲಿ 23631 ಕುಟುಂಬಗಳು ಶೌಚಾಲಯ ಹೊಂದಿದ್ದು, 6762 ಕುಟುಂಬಗಳ ಶೌಚಾಲಯ ನಿರ್ಮಾಣ ಇನ್ನೂ ಬಾಕಿ ಇದೆ.

ಶರಣು ಸೊಲಗಿ

ಮುಂಡರಗಿ: ತಾಲೂಕಿನಲ್ಲಿ ಬಯಲು ಬಹಿರ್ದೆಸೆ ಎನ್ನುವುದು ತೀರಾ ಸಾಮಾನ್ಯ ವಿಷಯವಾಗಿದೆ. ಪ್ರತಿಯೊಂದು ಗ್ರಾಮಗಳಿಗೆ ತೆರಳಿದರೂ ನಮ್ಮ ವ್ಯವಸ್ಥೆಯನ್ನು ಅಣಕಿಸುವಂತೆ ಗೋಚರವಾಗುತ್ತದೆ, ಆದರೆ ಅಧಿಕಾರಿಗಳು ಮಾತ್ರ ಅದ್ಯಾವ ಮಾನದಂಡದ ಮೇಲೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಎಂದು 2019ರಲ್ಲಿಯೇ ಘೋಷಣೆ ಮಾಡಿದ್ದಾರೆ ಎನ್ನುವುದು ಆಶ್ಚರ್ಯದ ಸಂಗತಿ.

ತಾಲೂಕಿನ 19 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 29401 ಕುಟುಂಬಗಳಿದ್ದು, ಅವುಗಳಲ್ಲಿ 22784 ಕುಟುಂಬಗಳು ಶೌಚಾಲಯ ಹೊಂದಿದ್ದು, 6713 ಕುಟುಂಬಗಳ ಶೌಚಾಲಯ ನಿರ್ಮಾಣ ಇನ್ನೂ ಬಾಕಿ ಇದೆ. ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು, ಸಂಜೆ ಸೂರ್ಯಾಸ್ತದ ನಂತರ ಕೈಯಲ್ಲಿ ತಂಬಿಗೆ ಹಿಡಿದು ಬಯಲು ಬಹಿರ್ದೆಸೆಗೆ ತೆರಳುತ್ತಿರುವುದನ್ನು ಎಲ್ಲೆಡೆ ಕಾಣಬಹುದು.

ಬಯಲು ಬಹಿರ್ದೆಸೆ ಮಾಡುವುದರಿಂದ ಮಳೆಯಾದಾಗ ನೀರು ಹರಿದು ಹೋಗಿ ಗ್ರಾಮೀಣ ಪ್ರದೇಶದ ಕೆರೆಗಳಿಗೆ ಸೇರುವುದರಿಂದ ಆ ಕೆರೆಯ ನೀರನ್ನು ಕುಡಿಯಲು ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಮೂಲಕ ತೊಂದರೆ ಉಂಟಾಗಲಿದೆ. ಈಗಲೂ ಗ್ರಾಮೀಣ ಪ್ರದೇಶದ ವಿವಿಧ ರಸ್ತೆಗಳಿಗೆ ತೆರಳಿದರೆ ಸಾಕು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕಾಳಜಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಜಾಣಕುರುಡು ನೀತಿ ಅನುಸರಿಸುತ್ತಿರುವುದೇ ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿರಲು ಕಾರಣವಾಗಿದೆ.

ಜನತೆಗೆ ತಿಳಿವಳಿಕೆ: ತಾಲೂಕಿನ ಎಲ್ಲ 19 ಗ್ರಾಪಂ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣದ ಕುರಿತು ಸರ್ವೇ ಮಾಡಿಸುತ್ತಿದ್ದು, ಇದುವರೆಗೂ ಯಾರೂ ಶೌಚಾಲಯ ನಿರ್ಮಾಣ ಮಾಡಿಕೊಂಡಿಲ್ಲವೋ ಅವರಿಗೆ ತ್ವರಿತವಾಗಿ ನಿರ್ಮಾಣ ಮಾಡಿಕೊಳ್ಳವಂತೆ ಸೂಚಿಸುವ ಮೂಲಕ ಬಯಲು ಬಹಿರ್ದೆಸೆಯಿಂದಾಗುವ ದುಷ್ಪರಿಣಾಮದ ಕುರಿತು ಸಹ ಜನತೆಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ತಾಪಂ ಇಒ ವಿಜಯಕುಮಾರ ಬೆಣ್ಣಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಜನೆ ಕಾಲಹರಣಕ್ಕಲ್ಲ: ಶ್ರೀ ವೇದವರ್ಧನ ತೀರ್ಥರು
ಫ್ಲೆಕ್ಸ್ ತೆರವಿಗೆ ವಿರೋಧ: ಪುರಸಭೆಗೆ ಮುತ್ತಿಗೆ ಪ್ರತಿಭಟನೆ