ಉಡುಪಿ: ಅಧಿಕ ಜೇಷ್ಟ ಮಾಸದ ಪ್ರಯುಕ್ತ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಘಟಕದ ನೇತೃತ್ವದಲ್ಲಿ ಭಜನಾಮೃತವನ್ನು ಕೃಷ್ಣಮಠದ ರಾಜಾಂಗಣದಲ್ಲಿ ಭಜನಾಮೃತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟಿಸಿದ ಪರ್ಯಾಯ ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಪುಣ್ಯಪ್ರದವಾದ ಭಜನೆಯನ್ನು ದೇವರ ಸ್ಮರಣೆಯ ನೆಲೆಯಲ್ಲಿ ಮಾಡಬೇಕೇ ಹೊರತು ಟೈಂಪಾಸ್‌ಗಲ್ಲ. ಕಲಿಯುಗದಲ್ಲಿ ಭಜನೆಯಿಂದ ಭಗವಂತ ಸಂತೃಪ್ತನಾಗಲು ಸಾಧ್ಯವಿದೆ, ಭಜನೆಗೆ ಭಕ್ತಿ ಮುಖ್ಯ ಎಂದರು.ದೇವರ ಸನ್ನಿಧಾನದಲ್ಲಿ ದೇವರಿಗೆ ಪ್ರಿಯವಾದ ಕೆಲಸ ಮಾಡುವುದು ದೇವರಿಗೆ ತೃಪ್ತಿ ನೀಡುತ್ತದೆ. ಅಧಿಕ ಮಾಸದಲ್ಲಿ ಮಾಡುವ ಭಜನೆಯಿಂದ ಅಧಿಕ ಫಲ ದೊರೆಯಲು ಸಾಧ್ಯ ಎಂದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಭಜನಾ ಪರಿಷತ್ ದ.ಕ. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು, ವಲಯ ಸಂಯೋಜಕರಾದ ಗಣೇಶ್ ಕುಮಾ‌ರ್ ಸಂಪಿಗೆನಗರ, ರೂಪಾಶ್ರೀ ಸಹಿತ ನೂರಾರು ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು. ಉಡುಪಿ ತಾಲೂಕು ಭಜನಾ ಪರಿಷತ್ ಪ್ರಧಾನ ಕಾಯದರ್ಶಿ ಶಿವಕುಮಾ‌ರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪರಿಷತ್ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾ‌ರ್, ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ 33 ಭಜನಾ ಕೃತಿಗಳ ಸಾಮೂಹಿಕ ಗಾಯನ ನಡೆಯಿತು.