ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆ ಪುರಸಭೆ ವತಿಯಿಂದ ನಗರದಲ್ಲಿ ಅಳವಡಿಸಲಾಗಿದ್ದ ಕೆಲ ಫ್ಲೆಕ್ಸ್ ಬೋರ್ಡ್‌ಗಳನ್ನು ತೆರವುಗೊಳಿಸಿರುವ ಕ್ರಮ ಖಂಡಿಸಿ ವಿರಾಜಪೇಟೆಯ ಮಾಸ್ಟರ್ಸ್ ಕ್ಲಬ್ ಫುಟ್ಬಾಲ್ ತಂಡದ ಸದಸ್ಯರು ಗುರುವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಫಿಫಾ ವಿಶ್ವಕಪ್‌ಗೆ ಶುಭಾಶಯ ಕೋರುವ ಉದ್ದೇಶದಿಂದ ಮಾಸ್ಟರ್ಸ್ ಕ್ಲಬ್ ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಯಾರೋ ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ‘ಫ್ಲೆಕ್ಸ್ ಹಾವಳಿ’ ಕುರಿತು ವ್ಯಕ್ತವಾದ ಅಭಿಪ್ರಾಯಗಳನ್ನು ನೆಪವಾಗಿಟ್ಟುಕೊಂಡು, ಪುರಸಭೆ ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ ರಾತ್ರೋರಾತ್ರಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪುರಸಭೆ ಕಚೇರಿಗೆ ಆಗಮಿಸಿದ ಕ್ಲಬ್ ಸದಸ್ಯರು ಮುಖ್ಯಾಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿ, ತೆರವುಗೊಳಿಸಿರುವ ಫ್ಲೆಕ್ಸ್‌ಗಳನ್ನು ಮರು ಅಳವಡಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಸದಸ್ಯರು ಮುಖ್ಯಧಿಕಾರಿ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ತೆರಳಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಮಾಸ್ಟರ್ಸ್ ಕ್ಲಬ್ ಹಾಗೂ ಅದರ ಸದಸ್ಯರನ್ನು ಅವಹೇಳನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದರು.ಕ್ಲಬ್ ಅಧ್ಯಕ್ಷರಾದ ಭಾಸ್ಕರ್, ಸದಸ್ಯರಾದ ಬಿ ಎಂ ಗಣೇಶ್, ಜಿ ಜಿ ಮೋಹನ್, ಅಬ್ದುಲ್ ಜಲಿಲ್, ರಜನಿಕಾಂತ್, ಮೇಲ್ವಿನ್ ಲೋಬೊ ಗಣೇಶ್, ಅನಿಲ್, ಉಪೇಂದ್ರ, ಅಲ್ತಾಫ್, ತಂಬು ರಾಮಕೃಷ್ಣ, ಜಿಮ್ಮಿ ಜೋಸೆಫ್, ಜಾಕಿರ್ (ಕುಳ್ಳಿ ) ಇನ್ನಿತರ ಸುಮಾರು ನಲವತ್ತಕ್ಕೂ ಅಧಿಕ ಸದಸ್ಯರು ಹಾಜರಿದ್ದರು.