ಪಿ.ಎಸ್.ಪಾಟೀಲಕನ್ನಡಪ್ರಭ ವಾರ್ತೆ ರೋಣ
ನೆರೆ ಹಾವಳಿಗೆ ತುತ್ತಾಗಿ ಸ್ಥಳಾಂತರಗೊಂಡ ತಾಲೂಕಿನ 11ರಲ್ಲಿ 9 ಗ್ರಾಮಗಳು ಮಲಪ್ರಭಾ ನದಿ ಪ್ರವಾಹಕ್ಕೆ ಹಾಗೂ ಯಾ.ಸ. ಹಡಗಲಿ, ಮಾಳವಾಡ ಗ್ರಾಮಗಳು ಬೆಣ್ಣೆಹಳ್ಳ ಪ್ರವಾಹಕ್ಕೆ ತುತ್ತಾಗಿ ಸ್ಥಳಾಂತರಗೊಂಡಿವೆ. ಶೇ. 80ರಷ್ಟು ಕುಟುಂಬಗಳು ನವಗ್ರಾಮದಲ್ಲಿ ವಾಸವಾಗಿವೆ.
2007 ಮತ್ತು 2009ರಲ್ಲಿ ಮಹಾಮಳೆಗೆ ಬೆಣ್ಣೆಹಳ್ಳ ತುಂಬಿ ಹರಿದು, ಮಾಳವಾಡ ಗ್ರಾಮ ಜಲಾವೃತವಾಯಿತು. ಜನ-ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. 2007ರ ಮುಂಚೆಯೂ ಪ್ರತಿ ಮಳೆಗಾಲದಲ್ಲಿ ಬೆಣ್ಣಿಹಳ್ಳದ ನೀರು ಮಾಳವಾಡ ಗ್ರಾಮಕ್ಕೆ ನುಗ್ಗುತ್ತಿತ್ತು. 2007, 2009ರಲ್ಲಿ ಗರಿಷ್ಠ ಹಾನಿಯಾಯಿತು. ಗ್ರಾಮದೊಳಗೆ ನುಗ್ಗಿದ ನೀರು ತಿಂಗಳ ವರೆಗೂ ಕಾಡಿತು. ಅದೆಷ್ಟೋ ಮನೆಗಳು ನೆಲಸಮವಾದವು. ದವಸ-ಧಾನ್ಯಗಳು, ಪಾತ್ರೆ, ಬಟ್ಟೆಗಳು ನೀರು ಪಾಲಾದವು. ಆ ವೇಳೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮಾಳವಾಡ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿತು.17ರೈತರಿಂದ ಎಕರೆಗೆ ₹ 12.5 ಲಕ್ಷದಂತೆ ಒಟ್ಟು 58 ಎಕರೆ ಖರೀದಿಸಿತು. ಈ ಪ್ರದೇಶದಲ್ಲಿ ಜಿಂದಾಲ್ ಕಂಪನಿ 140 ಮನೆ ಮತ್ತು ಧಾರವಾಡ ನಿರ್ಮಿತಿ ಕೇಂದ್ರ 465 ಮನೆ ಸೇರಿ ಒಟ್ಟು 605 ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು. ಸ್ಥಳಾಂತರಗೊಂಡ ಪೈಕಿ 2ನೇ ದೊಡ್ಡ ಗ್ರಾಮ ಇದಾಗಿದೆ.
ಮನೆ ಹಂಚಿಕೆ ಗೊಂದಲ: 2011ರಲ್ಲಿ 514 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಮತ್ತಷ್ಟು ಜನ ನಮಗೆ ಮನೆಯಿಲ್ಲ, ಜಾಗವೂ ಇಲ್ಲ ಎಂದು ಜನರು ಬೇಡಿಕೆ ಇಟ್ಟರು. ಆಗ ಮತ್ತೆ 91 ಫಲಾನುಭವಿಗಳನ್ನು ಆಯ್ಕೆ ಮಾಡಿ ಒಟ್ಟು 605 ಮನೆಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಲಾಯಿತು. ಹಕ್ಕುಪತ್ರ, ಮನೆ ಹಂಚಿಕೆ ಪೂರ್ಣಗೊಂಡು 13 ವರ್ಷ ಕಳೆದರೂ ಇನ್ನೂ ಶೇ. 20ರಷ್ಟು ಕುಟುಂಬಗಳು ನಮಗೆ ನ್ಯಾಯಯುತವಾಗಿ ಬರಬೇಕಿದ್ದ ಮನೆಗಳು ಬಂದಿಲ್ಲ, ಮನೆ ಇಲ್ಲದವರನ್ನು ಕಡೆಗಣಿಸಿದ್ದಾರೆ. ಉಳ್ಳವರೇ ಪ್ರಭಾವ ಬಳಸಿ ಹೆಚ್ಚು ಮನೆ ತೆಗೆದುಕೊಂಡಿದ್ದಾರೆ, ನಾಲ್ಕು ಕುಟುಂಬಗಳು ಒಂದೇ ಚಿಕ್ಕ ಮನೆಯಲ್ಲಿ ವಾಸಿಸುವುದಾದರೂ ಹೇಗೆ? ಹೀಗೆ ಒಂದೊಂದು ಕುಟುಂಬಗಳು ಒಂದೊಂದು ಸಮಸ್ಯೆ ಮುಂದಿಟ್ಟುಕೊಂಡು ಈಗಲೂ ನವಗ್ರಾಮದಲ್ಲಿ ಮನೆಗಾಗಿ ಬೇಡಿಕೆ ಇಟ್ಟಿದ್ದು, ಮನೆ ಹಂಚಿಕೆ ಗೊಂದಲ ನಿಂತಿಲ್ಲ. ಅನೇಕ ಕುಟುಂಬಗಳಿಗೆ ಮನೆ ಸಿಕ್ಕಿಲ್ಲ ಎಂಬ ಆರೋಪ ಈಗಲೂ ಕೇಳಿ ಬರುತ್ತಿದೆ. ಮನೆ ಸಿಗದಿರುವ ಹಾಗೂ ಮನೆ ಹಂಚಿಕೆ ಗೊಂದಲದಿಂದ ಶೇ. 20ರಷ್ಟು ಕುಟುಂಬಗಳ ಮೂಲ, ಗ್ರಾಮದಲ್ಲಿಯೇ ವಾಸವಾಗಿವೆ.
2009ರಲ್ಲಿಯೇ ಅಡಿಪಾಯ ಹಾಕಲಾದ ಬಸ್ ನಿಲ್ದಾಣ ಕಟ್ಟಡ 13 ವರ್ಷವಾದರೂ ಹಾಗೆಯೇ ಇದೆ. ಶುದ್ಧ ನೀರಿನ ಘಟಕವಿದ್ದು, ಉಪಯೋಗವಾಗುತ್ತಿಲ್ಲ. ಜಲಜೀವನ ಮಿಷನ್ ಯೋಜನೆಯಡಿ ಮನೆಗೊಂದು ನಳ ಅಳವಡಿಸಿದ್ದು, ಒಮ್ಮೆಯೂ ನೀರು ಪೂರೈಸಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಮೂಲಕ ವಾರದಲ್ಲಿ 2 ಬಾರಿ ನೀರು ಪೂರೈಸಲಾಗುತ್ತಿದೆ. ನಾಗರಿಕ ಸೌಲಭ್ಯಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಜಾಲಿಕಂಟಿ ಹೆಮ್ಮರವಾಗಿ ಬೆಳೆದಿವೆ. ಹೀಗೆ ಸಾಕಷ್ಟು ಸಮಸ್ಯೆಗಳ ಆಗರದಲ್ಲಿ ನರಳುತ್ತಿದೆ ಮಾಳವಾಡ ಆಸರೆ ನವಗ್ರಾಮ
ಮಹಿಳಾ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾಯೋಜನೆ ಹಾಗೂ ವೈಯಕ್ತಿಕ ಶೌಚಾಲಯ ದುರಸ್ತಿಗೆ ಎಸ್‌ಬಿಎಂ ಯೋಜನೆಯಡಿ ವ್ಯವಸ್ಥೆ ಕಲ್ಪಿಸಲು ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಖಾತ್ರಿ ಯೋಜನೆಯಡಿ ₹4 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ. ಖಾತ್ರಿ ಯೋಜನೆಯಡಿ ಚರಂಡಿ ನಿರ್ಮಾಣ ಕಾಮಗಾರಿ ಹಾಕಿಕೊಂಡಿದ್ದು, ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದು ಕೌಜಗೇರಿ ಪಿಡಿಒ ಭೀಮಪ್ಪ ಓಲೇಕಾರ ಹೇಳಿದರು.