ಸಮಾಜ ಸುಧಾರಣೆಗೆ ಹೋರಾಡಿದವನ್ನು ಸ್ಮರಿಸಿ

KannadaprabhaNewsNetwork | Published : Mar 15, 2025 1:01 AM

ಸಾರಾಂಶ

ಯೋಗಿ ಯತೀಂದ್ರರು ಜಾತಿ ಪದ್ದತಿ, ಅಸ್ಪೃಶ್ಯತೆ ಸೇರಿದಂತೆ ಹಲವಾರು ಮೂಡನಂಬಿಕೆಗಳ ವಿರುದ್ಧ ಜನಸಾಮಾನ್ಯರಲ್ಲಿ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸುವ ಕಾಯಕ ಮಾಡಿದರು. ಈ ಭಾಗದಲ್ಲಿ ಹೆಚ್ಚು ಬಲಿಷ್ಟವಾದುದು ಬಲಿಜ ಸಮುದಾಯ. ಸಂಘಟನೆಯ ಮೂಲಕ ಎಲ್ಲವನ್ನೂ ಸಾಧನೆ ಮಾಡಬಹುದು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸಮಾಜದಲ್ಲಿದ್ದ ಮೂಢನಂಬಿಕೆ ಸೇರಿದಂತೆ ಅನೇಕ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ, ಜನರನ್ನು ಜಾಗೃತರನ್ನಾಗಿ ಮಾಡಿದಂತಹ ಕೈವಾರ ತಾತಯ್ಯ, ಯೋಗಿ ವೇಮನ, ಬಸವಣ್ಣ ರವರಂತಹ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ ರವರ 299ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗಿ ಯತೀಂದ್ರರು ಜಾತಿ ಪದ್ದತಿ, ಅಸ್ಪೃಶ್ಯತೆ ಸೇರಿದಂತೆ ಹಲವಾರು ಮೂಡನಂಬಿಕೆಗಳ ವಿರುದ್ಧ ಜನಸಾಮಾನ್ಯರಲ್ಲಿ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸುವ ಕಾಯಕ ಮಾಡಿದರು ಎಂದರು.

ಕೀರ್ತನೆಯಲ್ಲಿನ ಬೋಧನೆ ಪಾಲಿಸಿ

ಇನ್ನೂ ಎಲ್ಲರೂ ದೇವರನ್ನು ಸದಾ ಪೂಜಿಸಬೇಕು. ದೇವರನ್ನು ಪೂಜೆ ಮಾಡುವುದು ಎಂದರೇ ದೂರದ ಪ್ರದೇಶಗಳಲ್ಲಿ ಹೋಗುವುದು ಮಾತ್ರವಲ್ಲ ತಮ್ಮ ಮನದಲ್ಲಿಯೇ ದೇವರನ್ನು ಇಟ್ಟು ಅಥವಾ ಮನೆಯಲ್ಲಿಯೇ ದೇವರನ್ನು ಪೂಜಿಸಿ, 10-15 ನಿಮಿಷ ಧ್ಯಾನ ಮಾಡಿದರೇ ದೇವರು ಒಲಿಯುತ್ತಾನೆ. ಇಂದು ನಾವೆಲ್ಲರೂ ಕೈವಾರ ತಾತಯ್ಯನವರ ಕೀರ್ತನೆಗಳನ್ನು ಹಾಡೋಣ, ಅವರ ಆದರ್ಶಗಳನ್ನು ಪಾಲನೆ ಮಾಡೋಣ ಎಂದರು.

ಇನ್ನೂ ಸಮುದಾಯದವರು ಸಮುದಾಯ ಭವನ ಹಾಗೂ ಕೈವಾರ ತಾತಯ್ಯನವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಮನವಿ ಮಾಡಿದ್ದು, ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸಮುದಾಯ ಸಂಘಟಿತವಾಗಲಿ

ಕಸಾಪ ನಿಕಟಪೂರ್ವ ಅಧ್ಯಕ್ಷ ಸ.ನ.ನಾಗೇಂದ್ರ ಮಾತನಾಡಿ, ಬಲಿಜ ಎಂಬ ಹೆಸರು ಹೇಗೆ ಬಂತು ಎಂಬ ವಿಚಾರವನ್ನು ತಿಳಿಸಿದರು. ಬಲಿಜ ಎಂದರೇ ತ್ಯಾಗದಲ್ಲಿ ಹುಟ್ಟಿದವರು ಬಲಿಜಿಗರು. ಸಮಾಜಕ್ಕೆ ಅವರ ಸೇವೆ ಅಪಾರವಾದುದು. ಈ ಭಾಗದಲ್ಲಿ ಹೆಚ್ಚು ಬಲಿಷ್ಟವಾದುದು ಬಲಿಜ ಸಮುದಾಯ. ಸಂಘಟನೆಯ ಮೂಲಕ ಎಲ್ಲವನ್ನೂ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಸಮುದಾಯ ಸಂಘಟಿತರಾಗಬೇಕು. ಪ್ರಸಿದ್ದಿ ಪಡೆದಂತಹ ಅಶ್ವತ್ಥಪ್ಪಸ್ವಾಮಿ ಮಠದಲ್ಲಿ ಸುಮಾರು ವರ್ಷಗಳ ಹಿಂದೆ ಸಾಮೂಹಿಕ ವಿವಾಹಗಳು ನಡೆಯುತ್ತಿತ್ತು. ಇದೀಗ ಅದು ನಿಂತಿದೆ. ಈ ಸಂಪ್ರದಾಯವನ್ನು ಪುನಃ ಪ್ರಾರಂಭಿಸಬೇಕು ಎಂದರು.

ತಾತಾಯ್ಯ ಭಾವಚಿತ್ರ ಮೆರವಣಿಗೆ

ಕಾರ್ಯಕ್ರಮದ ಅಂಗವಾಗಿ ಕೈವಾರ ತಾತಯ್ಯನವರ ಭಾವಚಿತ್ರವುಳ್ಳ ಬೆಳ್ಳಿರಥಗಳನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಬಲಿಜ ಸಂಘದ ಅಧ್ಯಕ್ಷ ವೆಂಕಟರಾಯಪ್ಪ, ಕಾರ್ಯದರ್ಶಿ ಶ್ರೀನಿವಾಸನಾಯ್ದು, ಪ.ಪಂ ಅಧ್ಯಕ್ಷ ವಿಕಾಸ್, ಮುಖಂಡರಾದ ಸಾಂಬಮೂರ್ತಿ, ರಾಮಚಂದ್ರಪ್ಪ, ದ್ವಾರಕನಾಥನಾಯ್ಡು, ರಮೇಶ್, ಅಂಬರೀಶ್, ಪ.ಪಂ ಸದಸ್ಯೆ ಮಂಜುಳ ಸೇರಿದಂತೆ ಬಲಿಜ ಸಮುದಾಯದ ಮುಖಂಡರು ಹಾಜರಿದ್ದರು.

Share this article