ವಿಶೇಷ ವರದಿ
ಹೌದು. ನೀವೊಮ್ಮೆ ನಗರದಲ್ಲಿ ಒಂದು ಸುತ್ತು ಹಾಕಿ ಫುಟ್‌ಪಾತ್‌ಗಳ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಫುಟ್‌ಪಾತ್ ಗಳ ಮೇಲೆ ಓಡಾಡಿದರೆ ಕೈ-ಕಾಲುಗಳು ಏನಾಗಬಹುದು? ಎಷ್ಟರ ಮಟ್ಟಿಗೆ ಸುರಕ್ಷಿತವಾಗಿ ಉಳಿಯಬಲ್ಲವು ಎಂಬ ಅಂದಾಜು ಸಿಗುತ್ತದೆ!
ನಗರದ ಬಹುತೇಕ ಫುಟ್‌ಪಾತ್‌ಗಳು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಬದಲಾಗಿ ಅವಘಡ ತಾಣಗಳಾಗಿ ಮಾರ್ಪಟ್ಟಿರುವುದರಿಂದ ಫುಟ್ಪಾತ್‌ಗಳ ಮೇಲೆ ಓಡಾಡಲು ಜನರು ಆತಂಕ ಪಡುವಂತಾಗಿದೆ. ಅಷ್ಟೇ ಅಲ್ಲ, ರಸ್ತೆ ಗುಂಡಿಗಳ ಊರು ಎಂದೇ ಕುಖ್ಯಾತಿಗೊಂಡಿರುವ ಬಳ್ಳಾರಿಯಲ್ಲೀಗ ಫುಟ್‌ಪಾತ್‌ಗಳ ದುಸ್ಥಿತಿಯೂ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಫುಟ್‌ಪಾತ್‌ಗಳನ್ನು ಅಂಗಡಿಗಳು, ಹೋಟೆಲ್‌ಗಳು, ತಳ್ಳುಗಾಡಿಗಳು ಹಾಗೂ ವಿವಿಧ ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವ ಪರಿಣಾಮ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಉಳಿದಿರುವ ಕೆಲವೇ ಫುಟ್‌ಪಾತ್‌ಗಳೂ ಅಲ್ಲಲ್ಲಿ ಗುಂಡಿ ಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿರುವುದರಿಂದ ಪಾದಚಾರಿಗಳು ಆತಂಕದಲ್ಲಿಯೇ ಹುಷಾರಾಗಿ ಹೆಜ್ಜೆ ಇಡುವಂತಾಗಿದೆ.
ಫುಟ್ಪಾತ್ಗಳ ಮೇಲಿನ ಗುಂಡಿಗಳು ರಾತ್ರಿ ವೇಳೆ ಕಾಣಿಸುವುದಿಲ್ಲ. ಮಳೆ ಬಂದಾಗ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ. ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಆಳ ಎಷ್ಟಿದೆ ಎಂಬುದು ತಿಳಿಯುವುದಿಲ್ಲ. ನೀರು ತುಂಬಿದ ಗುಂಡಿಗೆ ಕಾಲಿಟ್ಟರೆ ಎಡವಿ ಬಿದ್ದು ಕೈ ಕಾಲು ಮುರಿದುಕೊಂಡ ಘಟನೆಗಳು ಸಾಕಷ್ಟಿವೆ. ಮಕ್ಕಳು ಮತ್ತು ವೃದ್ಧರಿಗೆ ಇಂತಹ ಸ್ಥಳಗಳು ಇನ್ನಷ್ಟು ಅಪಾಯಕಾರಿಯಾಗಿವೆ. ಪುಟ್ಪಾತ್‌ಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮಹಾನಗರ ಪಾಲಿಕೆ ಈ ವರೆಗೆ ಮುಂದಾಗಿಲ್ಲ. ಹೀಗಾಗಿ ರಸ್ತೆಗಳ ಜೊತೆಗೆ ಅಲ್ಲಲ್ಲಿ ಫುಟ್‌ಪಾತ್ ಗುಂಡಿಗಳೂ ಬಾಯಿ ತೆಗೆದುಕೊಂಡು ಕುಳಿತಿವೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂಬ ಆಗ್ರಹಗಳು ಬಹುದಿನಗಳಿಂದಲೂ ಕೇಳಿಬರುತ್ತಿದೆ.ಬರೀ ಬಣ್ಣ ಬಳಿದರೆ ಸಾಕಾಗುವುದಿಲ್ಲ
ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಮುಖ ರಸ್ತೆಗಳು ಸದಾ ವಾಹನಗಳಿಂದ ತುಂಬಿರುತ್ತವೆ. ಇಂತಹ ಸಂದರ್ಭದಲ್ಲಿ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕು. ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡರೆ ಓಡಾಡುವ ಜನರ ಗತಿಯೇನು? ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ನಿವೃತ್ತ ಆರೋಗ್ಯ ಇಲಾಖೆ ಸಿಬ್ಬಂದಿ ವೇಮನರಾವ್ ಆಗ್ರಹಿಸಿದ್ದಾರೆ.