ಕೊಳಗೇರಿ ಜನರಿಗೆ ಅನ್ಯಾಯ: ಸ್ಲಂ ಬೋರ್ಡ್‌ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಬಹಿರಂಗ ಪತ್ರ ಚಳವಳಿ

KannadaprabhaNewsNetwork | Updated : Jul 20 2024, 11:30 AM IST

ಸಾರಾಂಶ

ಸರ್ಕಾರದ ಸುತ್ತೋಲೆ ಪ್ರಕಾರ ಮನೆ ನಿರ್ಮಾಣ ಮಾಡುವುದನ್ನು ಬಿಟ್ಟು ನಗರದ ಅನೇಕ ಅರ್ಹ ಕೊಳಗೇರಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ

ಗದಗ: ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಸ್ಲಂ ಬೋರ್ಡ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ಸ್ಲಂ ನಿವಾಸಿಗಳಿಂದ ಬಹಿರಂಗ ಪತ್ರ ಚಳವಳಿ ನಡೆಸಿ ರಾಜ್ಯ ವಸತಿ ಇಲಾಖೆ ಸಚಿವರಿಗೆ ಒತ್ತಾಯಿಸಲಾಯಿತು.

ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಇಮ್ತಿಯಾಜ. ಆರ್.ಮಾನ್ವಿ ಮಾತನಾಡಿ, ಹಲವು ದಶಕಗಳಿಂದ ರಾಜ್ಯ ಸರ್ಕಾರದಿಂದ ಕೊಳಗೇರಿಗಳ ಅಭಿವೃದ್ಧಿ ಹಾಗೂ ಸ್ಲಂ ಜನರ ಪುನರ್ವಸತಿಗಾಗಿ ವಿವಿಧ ಜನಪರ ಯೋಜನೆ ಜಾರಿಗೆ ತರಲಾಗುತ್ತಿದೆ, ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿಯಲ್ಲಿ ಗದಗ-ಬೆಟಗೇರಿ ನಗರದಲ್ಲಿ 863 ಮನೆ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ನಗರದ ಅನೇಕ ಕೊಳಗೇರಿ ಪ್ರದೇಶಗಳಲ್ಲಿ ಮನೆ ನಿರ್ಮಿಸಲಾಗುತ್ತಿದೆ, ಆದರೆ ಗದಗ ಸ್ಲಂ ಬೋರ್ಡ್‌ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಯೋಜನೆಯಲ್ಲಿ ಮನೆಗಳನ್ನು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ ಹಾಗೂ ಸರ್ಕಾರದ ಸುತ್ತೋಲೆ ಪ್ರಕಾರ ಮನೆ ನಿರ್ಮಾಣ ಮಾಡುವುದನ್ನು ಬಿಟ್ಟು ನಗರದ ಅನೇಕ ಅರ್ಹ ಕೊಳಗೇರಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಸತಿ ಯೋಜನೆಯ ಕೊಟ್ಯಂತರ ಬಡವರ ಹಾಗೂ ಸ್ಲಂ ಜನರ ಹಣದಲ್ಲಿ ಸ್ಲಂ ಬೋರ್ಡ ಅಧಿಕಾರಿಗಳು ಮತ್ತು ಗುತ್ತಿಗೆದಾರ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅವಳಿ ನಗರದ ವಿವಿಧ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ ಪ್ರಕಾರ ಘೋಷಣೆ ಮಾಡಲು ಸ್ಲಂ ಬೋರ್ಡ್‌ ಕಚೇರಿಗೆ ಸ್ಲಂ ನಿವಾಸಿಗಳು ದಾಖಲೆ ಸಲ್ಲಿಸಿ ಎರಡು ವರ್ಷಗಳು ಕಳೆದರೂ ಸಹ ಈವರೆಗೊ ಒಂದು ಗುಡಿಸಲು ಪ್ರದೇಶ ಘೋಷಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಗುಡಿಸಲು ಪ್ರದೇಶಗಳನ್ನು ಸ್ಲಂ ಘೋಷಣೆ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕಾದ ಅಧಿಕಾರಿಗಳು ಕೊಳಗೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಗದಗ ಜಿಲ್ಲಾ ಸ್ಲಂ ಸಮಿತಿ ಇಂತಹ ಭ್ರಷ್ಟ ಹಾಗೂ ಸ್ಲಂ ಜನರ ವಿರೋಧಿ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ನಿರಂತರ ಹೋರಾಟ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಖಂಡಿಸುತ್ತೇವೆ. ಕೂಡಲೇ ಸ್ಲಂ ಜನರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಸ್ಲಂ ಜನರ ಅನುದಾನದಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಬೇಕು. ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಂಡು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಈ ವೇಳೆ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಇಬ್ರಾಹಿಮ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೌಲಾಸಾಬ್‌ ಗಚ್ಚಿ, ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ, ಮೈಮುನ ಬೈರಕದಾರ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ್‌ ಇಸ್ಮಾಯಿಲನವರ, ಮಕ್ತುಮಸಾಬ್‌ ಮುಲ್ಲಾನವರ, ಮಲೇಶಪ್ಪ ಕಲಾಲ, ಮೆಹರುನಿಸಾ ಡಂಬಳ, ಚಂದ್ರಪ್ಪ ಲಕ್ಕುಂಡಿ, ಜಂದಿಸಾಬ್‌ ಬಳ್ಳಾರಿ, ದುರ್ಗಪ್ಪ ಮಣವಡ್ಡರ, ಶರಣಪ್ಪ ಬಿಂಗದಕಟ್ಟಿ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ಶಿವಾನಂದ ಶಿಗ್ಲಿ, ರಾಜೇಸಾಬ್‌ ಸೈಯದ್‌, ಮಂಜುನಾಥ ಒಂಟಿಯಲಿ ಹಾಗೂ ಸ್ಲಂ ನಿವಾಸಿಗಳು ಇದ್ದರು.

Share this article