ಕನ್ನಡಪ್ರಭ ವಾರ್ತೆ ಬೇಲೂರು
ಇದೇ ರೀತಿ ಎರಡು ದಿನಗಳ ಹಿಂದೆ ಇದೇ ಬಸ್ ನಿಲ್ದಾಣದ ತಿರುವಿನಲ್ಲಿ ಬೃಹತ್ ಗುಂಡಿಯೊಳಗೆ ಬಸ್ ಇಳಿದಾಗ ಬಾಗಿಲ ಸಮೇತ ಕಳಚಿ ಬಿದ್ದು ವ್ಯಕ್ತಿಯೊಬ್ಬರು ಗುಂಡಿಯೊಳಗೆ ಬಿದ್ದು ತಲೆಗೆ ಪೆಟ್ಟಾಗಿದೆ. ಸ್ಥಳೀಯರ ಮತ್ತು ಆಟೋ ಚಾಲಕರ ಸಮಯಪ್ರಜ್ಞೆಯಿಂದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದು ನಂತರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿನಿತ್ಯ ವಾಹನ ಸವಾರರು ಈ ಗುಂಡಿಯಿಂದ ನರಕಯಾತನೆ ಅನುಭವಿಸುತ್ತಿದ್ದು, ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವೈಜ್ಞಾನಿಕ ಬಸ್ ನಿಲ್ದಾಣದ ತಿರುವು ಈಗ ಜನರ ಪ್ರಾಣಕ್ಕೆ ಕುತ್ತು ತರುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ :
ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದಿಂದ ಈ ಗುಂಡಿ ಹಲವು ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿದೆ. ಪುರಸಭೆ ಮಾಜಿ ಅಧ್ಯಕ್ಷ ಅಶೋಕ್ ತಮ್ಮ ವ್ಯಪ್ತಿಗೆ ಬರದಿದ್ದರೂ ತಾತ್ಕಲಿಕವಾಗಿ ಗುಂಡಿ ಮುಚ್ಚಿಸಿದ್ದರು.ಕೆಲ ತಿಂಗಳ ಹಿಂದೆ ತಾಲೂಕು ದಂಡಾಧಿಕಾರಿ ಶ್ರೀಧರ್ ಕಂಕನವಾಡಿ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ಜಲ್ಲಿಕಲ್ಲು ತುಂಬುವ ಕೆಲಸ ಮಾಡಿಸಿದ್ದರು. ಆದರೆ, ಕೆಲವೇ ವಾರಗಳಲ್ಲಿ ಅದೇ ಸ್ಥಳದಲ್ಲಿ ಮತ್ತೆ ಬೃಹತ್ ಗುಂಡಿಯಾಗಿ ಬದಲಾಗಿದೆ. ಈ ಬಗ್ಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕೇಳಿದರೆ ನಾವು ಸಾಕಷ್ಟು ಬಾರಿ ಕಾಮಗಾರಿ ಮಾಡಿದ್ದೇವೆ, ಇನ್ನು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಪಿಡಬ್ಲ್ಯೂಡಿ ಮತ್ತು ಪುರಸಭೆಗೆ ಬರುತ್ತದೆ ಎಂದು ಹೇಳುತ್ತಾರೆ. ಎಂಜಿನಿಯರ್‌ಗೆ ಸೂಕ್ತ ಬಹುಮಾನ :
ಈ ಬಗ್ಗೆ ಬೇಲೂರು ಹಳೇಬೀಡು ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್ ಮಾತನಾಡಿ, ಬಸ್ ನಿಲ್ದಾಣದಲ್ಲಿರುವ ಗುಂಡಿಯ ಹಲವಾರು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರು ಶಾಶ್ವತವಾಗಿ ಗುಂಡಿ ಮುಚ್ಚುವ ಕೆಲಸ ಇದುವರೆಗೂ ಆಗಿಲ್ಲ. ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಇರುವ ಗುಂಡಿಯನ್ನು ಶಾಶ್ವತವಾಗಿ ಮುಚ್ಚಿ ಪರಿಹಾರ ಕಂಡುಹಿಡಿಯುವ ಎಂಜಿನಿಯರ್ ಮುಂದೆ ಬಂದರೆ ಅವರಿಗೆ ಕೋಟೆ ಮಿತ್ರ ಮಂಡಳಿ ವತಿಯಿಂದ ಸೂಕ್ತ ಬಹುಮಾನವನ್ನು ಕೊಡಲಾಗುವುದು ಎಂದರು.