ಬಾಲಕಾರ್ಮಿಕರ ವಿರುದ್ಧ ಕಾರ್ಯಾಚರಣೆ: 14 ಮಕ್ಕಳ ರಕ್ಷಣೆ

KannadaprabhaNewsNetwork |  
Published : Sep 10, 2026, 02:15 AM IST
ಕೊಪ್ಪಳ ಜಿಲ್ಲೆಯ ವಿವಿಧೆಡೆ ಬಾಲ ಕಾರ್ಮಿಕ ಜಾಗೃತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ‘ಪ್ಯಾನ್ ಇಂಡಿಯಾ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಷನ್ ಕ್ಯಾಂಪೇನ್-4.0’ ಅಭಿಯಾನದಡಿ ಜಿಲ್ಲೆಯಲ್ಲಿ ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಕೊಪ್ಪಳ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ‘ಪ್ಯಾನ್ ಇಂಡಿಯಾ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಷನ್ ಕ್ಯಾಂಪೇನ್-4.0’ ಅಭಿಯಾನದಡಿ ಜಿಲ್ಲೆಯಲ್ಲಿ ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ನಿರ್ದೇಶನದಂತೆ ಜೂನ್‌ನಿಂದ ಆಗಸ್ಟ್ 2026ರ ವರೆಗೆ ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಕ್ಕಳ ಸಹಾಯವಾಣಿ-1098 ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಪಾಸಣೆ ನಡೆಸಲಾಗಿದೆ.

ಕೊಪ್ಪಳ, ಯಲಬುರ್ಗಾ, ಕುಕನೂರು, ಕಾರಟಗಿ, ಗಂಗಾವತಿ ಹಾಗೂ ಮುನಿರಾಬಾದ್ ಸೇರಿದಂತೆ ವಿವಿಧೆಡೆ ಹೋಟೆಲ್, ಪೇಡಾ ಅಂಗಡಿ, ಗ್ಯಾರೇಜ್, ಆಟೋಮೊಬೈಲ್ ಅಂಗಡಿ, ಮೆಟಲ್ ಸಾಮಾನುಗಳ ಅಂಗಡಿ, ಚಿಕನ್ ಸೆಂಟರ್ ಹಾಗೂ ಕುರಿ ಕಾಯುವ ಕೆಲಸಗಳಲ್ಲಿ ತೊಡಗಿದ್ದ ಮಕ್ಕಳನ್ನು ಕಾರ್ಯಾಚರಣೆ ವೇಳೆ ಪತ್ತೆಹಚ್ಚಲಾಗಿದೆ.

ಜೂ. 14ರಂದು ಕೊಪ್ಪಳದಲ್ಲಿ ಮೂವರು ಕಿಶೋರ ಕಾರ್ಮಿಕರು, ಜೂ. 19ರಂದು ಯಲಬುರ್ಗಾದಲ್ಲಿ ಇಬ್ಬರು ಕಿಶೋರ ಕಾರ್ಮಿಕರು ಹಾಗೂ ಓರ್ವ ಬಾಲಕಾರ್ಮಿಕ, ಜೂ. 30ರಂದು ಕುಕನೂರಿನಲ್ಲಿ ಓರ್ವ ಕಿಶೋರ ಕಾರ್ಮಿಕ ಹಾಗೂ ಜು. 2ರಂದು ಅಳವಂಡಿಯಲ್ಲಿ 13 ವರ್ಷದ ಬಾಲಕಾರ್ಮಿಕನನ್ನು ರಕ್ಷಿಸಲಾಗಿದೆ. ಜು. 28ರಂದು ಕಾರಟಗಿಯಲ್ಲಿ ಓರ್ವ ಕಿಶೋರ ಕಾರ್ಮಿಕ, ಆ. 5ರಂದು ಗಂಗಾವತಿ ತಾಲೂಕಿನ ತಿಮ್ಮಲಾಪುರದಲ್ಲಿ 13 ವರ್ಷದ ಬಾಲಕಾರ್ಮಿಕ, ಆ. 20ರಂದು ಕೊಪ್ಪಳದಲ್ಲಿ ಓರ್ವ ಕಿಶೋರ ಕಾರ್ಮಿಕ ಹಾಗೂ ಆ. 21ರಂದು ಮುನಿರಾಬಾದ್‌ನಲ್ಲಿ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ.

9 ಪ್ರಕರಣ ದಾಖಲು: ಜೂನ್‌ನಿಂದ ಆಗಸ್ಟ್‌ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 12 ಕಿಶೋರ ಕಾರ್ಮಿಕರು ಹಾಗೂ ಇಬ್ಬರು ಬಾಲಕಾರ್ಮಿಕರು ಸೇರಿದಂತೆ 14 ಮಕ್ಕಳನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಪುನರ್ವಸತಿ, ಶಿಕ್ಷಣ ಸೇರಿದಂತೆ ಅವರನ್ನು ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗಿದೆ.

ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡ ಮಾಲೀಕರ ವಿರುದ್ಧ ಆಯಾ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವರೆಗೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಉಳಿದ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಕೊಪ್ಪಳ ನ್ಯಾಯಾಲಯದಲ್ಲಿ 3, ಯಲಬುರ್ಗಾ ನ್ಯಾಯಾಲಯದಲ್ಲಿ 2 ಹಾಗೂ ಕುಕನೂರು ನ್ಯಾಯಾಲಯದಲ್ಲಿ 1 ಸೇರಿದಂತೆ ಒಟ್ಟು 6 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಾರ್ಮಿಕ ನಿರೀಕ್ಷಕಿ ಮಂಜುಳಾ ಅವರು ಕೊಪ್ಪಳ ನ್ಯಾಯಾಲಯದಲ್ಲಿ 1 ಪ್ರಕರಣ ಹಾಗೂ ಕಾರ್ಮಿಕ ನಿರೀಕ್ಷಕಿ ನಿವೇದಿತಾ ಅವರು ಕುಷ್ಟಗಿ ನ್ಯಾಯಾಲಯದಲ್ಲಿ 2 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ವರೆಗೂ 9 ಪ್ರಕರಣ ದಾಖಲು ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರು, ಕಾರ್ಮಿಕ ನಿರೀಕ್ಷಕರು, ಮಕ್ಕಳ ಸಹಾಯವಾಣಿ-1098 ಸಿಬ್ಬಂದಿ, ಸ್ಪಂದನಾ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಡಾ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮರು ಮಾರಾಟ!
ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯ