ಕನ್ನಡಪ್ರಭ ವಾರ್ತೆ ಮುಂಡರಗಿ
ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕಾ ಮಟ್ಟದ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಹಡಪದ ಸಮುದಾಯವು ಮೂಲತಃ ಲಿಂಗಾಯತ ಸಮುದಾಯವೇ ಆಗಿದೆ. ಆದರೆ ನಮ್ಮ ಸಮಾಜಕ್ಕೆ ಇಂದಿಗೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಿಗಬೇಕಾದ ಸೂಕ್ತ ಅಸ್ತಿತ್ವ ಸಿಕ್ಕಿಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳು ನಮ್ಮ ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ 2ಎ ಮೀಸಲಾತಿಯನ್ನು ಒದಗಿಸಿಕೊಡಬೇಕು. ನಮ್ಮ ಸಮಾಜದ ನೋವು, ಧ್ವನಿಯನ್ನು ಸರ್ಕಾರ ಆಲಿಸಬೇಕು. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಯವರೇ ಖುದ್ದಾಗಿ ನಮ್ಮ ಮಠ ಹಾಗೂ ಸಮಾಜದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸಮಾನತೆಯೇ ಬಸವಧರ್ಮದ ಜೀವಾಳ. ಬಸವಾದಿ ಶರಣರ ಕಾಲದಲ್ಲಿ ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ ಸೇರಿದಂತೆ ಸಮಾಜದ ಕಟ್ಟಕಡೆಯ ಶ್ರಮಿಕ ವರ್ಗದವರೆಲ್ಲರೂ ಸಮಾನತೆಯ ಹಕ್ಕನ್ನು ಪಡೆದಿದ್ದರು. ಬಸವಣ್ಣನವರು ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಸಮಾನ ಸ್ಥಾನಮಾನ ತಂದುಕೊಟ್ಟರು. ಆದರೆ, ಇಂದು ಬಸವತತ್ವದ ಮಠಗಳಲ್ಲಿಯೇ ಸಮಾನತೆ ಕಾಣೆಯಾಗುತ್ತಿರುವುದು ವಿಷಾದನೀಯ ಎಂದರು.ನಂದಿವೇರಿ ಮಠದ ಶಿವಕುಮಾರಸ್ವಾಮಿಜಿ ಮಾತನಾಡಿ, ಶತಮಾನಗಳು ಕಳೆದರೂ ಆ ವಚನಗಳು ಇಂದಿಗೂ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿವೆ. ನಾವು ಬಸವಣ್ಣ ಮತ್ತು ಅಪ್ಪಣ್ಣನವರ ಅನುಯಾಯಿಗಳಾಗಬೇಕಾದರೆ ಮೊದಲು ಇಷ್ಟಲಿಂಗವನ್ನು ಧರಿಸಿ, ನಿತ್ಯವೂ ಲಿಂಗಾರ್ಚನೆ ಮಾಡಬೇಕು ಎಂದರು. ತಾಲೂಕಾ ಶಿವಶರಣ ಹಡಪದ ಅಪ್ಪಣ್ಣ ಸಂಘದ ಈರಣ್ಣ ಹಡಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.