ಮುಂದುವರಿದ ಮಾದಕ ವ್ಯಸನಿಗಳ ಮೇಲಿನ ಕಾರ್ಯಾಚರಣೆ

KannadaprabhaNewsNetwork |  
Published : Apr 05, 2025, 12:48 AM IST
ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಮಾದಕ ವ್ಯಸನಿಗಳ ಜಾಗೃತಿ ಶಿಬಿರದಲ್ಲಿ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ವ್ಯಸನಿಗಳು ಹಾಗೂ ಅವರ ಪಾಲಕರೊಂದಿಗೆ ಚರ್ಚಿಸಿದರು. | Kannada Prabha

ಸಾರಾಂಶ

ಕಳೆದ ವರ್ಷ ಇದೇ ಮಾದರಿಯಲ್ಲಿ 4 ಬಾರಿ ಮಾದಕ ವ್ಯಸನಿಗಳ ಪತ್ತೆ ಹಚ್ಚುವ ಅಭಿಯಾನ ನಡೆಸಲಾಗಿತ್ತು

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡವನ್ನು ಮಾದಕ ವ್ಯಸನಿಗಳಿಂದ ಮುಕ್ತ ಮಾಡುವ ಉದ್ದೇಶದಿಂದ ಮಾದಕ ವ್ಯಸನಿಗಳ ಮೇಲೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಶುಕ್ರವಾರ ಒಟ್ಟು 505 ಶಂಕಿತ ವ್ಯಸನಿಗಳನ್ನು ಗುರುತಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ 197 ಜನರು ಮಾದಕ ವ್ಯಸನಿಗಳು ಎಂಬುದು ದೃಢಪಟ್ಟಿದೆ. ಅವರ ವಿರುದ್ಧ ವಿವಿಧ ಠಾಣೆಗಳಲ್ಲಿ ಒಟ್ಟು 46 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.

ಅವರು ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನಿಗಳ ಜಾಗೃತಿ ಶಿಬಿರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾದಕವಸ್ತು ಮಾರಾಟ ಮಾಡುವ ಪೆಡ್ಲರ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ.‌ ಕಳೆದ ವರ್ಷ ಇದೇ ಮಾದರಿಯಲ್ಲಿ 4 ಬಾರಿ ಮಾದಕ ವ್ಯಸನಿಗಳ ಪತ್ತೆ ಹಚ್ಚುವ ಅಭಿಯಾನ ನಡೆಸಲಾಗಿತ್ತು. ಆಗ 2 ಸಾವಿರಕ್ಕೂ ಅಧಿಕ ಜನರಲ್ಲಿ 1ಸಾವಿರಕ್ಕೂ ಹೆಚ್ಚು ಜನರು ವ್ಯಸನಿಗಳಿರುವುದು ಕಂಡುಬಂದಿತ್ತು. ಒಟ್ಟು 200ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು. ಈಗ 5ನೇ ಹಾಗೂ ಈ ವರ್ಷದ ಮೊದಲನೇಯ ಅಭಿಯಾನ ನಡೆಸಲಾಗಿದ್ದು, ಶೇ.40ರಷ್ಟು ಜನರು ಮಾದಕ ವ್ಯಸನಿಗಳಿರುವುದು ದೃಢಪಟ್ಟಿದೆ ಎಂದರು.

ಮೊದಲ ಬಾರಿ ಪ್ರಕರಣ ಕಂಡು ಬಂದವರನ್ನು ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಗೆ ಅವಕಾಶ ಇರುತ್ತದೆ. ಎರಡನೇ ಬಾರಿ ಕಂಡುಬಂದರೆ ಅಂಥವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಬಹುದು ಎಂದರು.

ಈಗಾಗಲೇ 40ಕ್ಕೂ ಹೆಚ್ಚಿನ ಪೆಡ್ಲರ್ಸ್‌ಗಳನ್ನು ಗುರುತಿಸಿ ಜೈಲಿಗೆ ಕಳಿಸಲಾಗಿದೆ. ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಈ 505 ಜನರ ಹೆಸರುಗಳು ಹೊರಬಂದಿದ್ದವು. ಕಳೆದ ಒಂದು ವಾರದಿಂದ ಕಾರ್ಯಾಚರಣೆ ಕೈಗೊಂಡು ಇವರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ನಮ್ಮ ಸಿಬ್ಬಂದಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಇದರಲ್ಲಿ ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು, ಸರ್ಕಾರಿ ನೌಕರರು, ವಿವಿಧ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರು ಸೇರಿದ್ದಾರೆ ಎಂದರು.

ಮೂಲ ಪತ್ತೆಗೆ ಕ್ರಮ: ಮಹಾನಗರಕ್ಕೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ರಾಜಸ್ತಾನ್, ಕೇರಳ, ರಾಜ್ಯದ ಬೆಂಗಳೂರು, ಬೀದರ ಕಡೆಗಳಿಂದ ಗಾಂಜಾ ತರಿಸಲಾಗುತ್ತಿದೆ. ಈಗಾಗಲೇ ಇಂತಹ ಹಲವು ಪ್ರಕರಣಗಳನ್ನು ಬೇಧಿಸಿ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಈ ವರ್ಷದ ಮೊದಲ ಅಭಿಯಾನಯಾಗಿದ್ದು, ಇದು ಮುಂದಿನ ದಿನಗಳಲ್ಲೂ ಮುಂದುವರೆಯುತ್ತದೆ ಎಂದರು.

ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಎಸಿಪಿಗಳಾದ ಶಿವಪ್ರಕಾಶ ನಾಯಕ, ಉಮೇಶ ಚಿಕ್ಕಮಠ, ಇನ್ಸಪೆಕ್ಟರ್‌ಗಳಾದ ರಾಘವೇಂದ್ರ ಹಳ್ಳೂರ, ಎಂ.ಎಸ್‌. ಹೂಗಾರ ಸೇರಿದಂತೆ ಹಲವರಿದ್ದರು.

ಬುದ್ದಿವಾದ ಹೇಳಿದ ಕಮೀಷನರ್‌: ಆರ್‌.ಎನ್‌.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಾದಕ ವ್ಯಸನಿಗಳ ಜಾಗೃತಿ ಶಿಬಿರದಲ್ಲಿ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ ಮಾದಕ ವ್ಯಸನಿಗಳ ಪಾಲಕರನ್ನು ಭೇಟಿಯಾಗಿ ಚರ್ಚಿಸಿದರು. ಈ ವೇಳೆ ಪಾಲಕರು ಪೊಲೀಸ್‌ ಆಯುಕ್ತರ ಮುಂದೆ ಕಣ್ಣೀರು ಹಾಕಿದರು. ಬಳಿ ವ್ಯಸನಿಗಳನ್ನು ತರಾಟೆಗೆ ತಗೆದುಕೊಂಡ ಆಯುಕ್ತರು, ಮನೆಯಲ್ಲಿನ ಪಾಲಕರ, ನಿಮ್ಮ ಕುಟುಂಬದ ಆರ್ಥಿಕ ಸ್ಥಿತಿ ಅರಿತುಕೊಂಡು ಜೀವನ ಸಾಗಿಸುವಂತೆ ಪಾಠ ಮಾಡಿದರು. ಇದೇ ರೀತಿ ಮುಂದುವರೆದಲ್ಲಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

PREV

Recommended Stories

ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!