- ಸಕ್ರೇಬೈಲ್ ಆನೆಗಳ ಬಳಕೆ: ಡಿಸಿಎಫ್ ರವೀಂದ್ರಕುಮಾರ್ । ಬೆಳೆಗಳ ನಾಶಗೈದಿರುವ ಆನೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಉಬ್ರಾಣಿ ಹೋಬಳಿಯ ಅರಣ್ಯ ಪ್ರದೇಶದಲ್ಲಿನ ಗ್ರಾಮಗಳಾದ ನೆಲ್ಲಿಹಂಕಲು, ಮರವಂಜಿ, ಹಲಕನಾಳ್, ರಾಜಗೊಂಡನಹಳ್ಳಿ, ಮುಗಳಿಹಳ್ಳಿ, ಬಸಾಪುರ ಈ ಪ್ರದೇಶಗಳ ಇನ್ನು ಹಲವಾರು ಗ್ರಾಮಗಳಲ್ಲಿ ಗದ್ದೆ, ತೋಟಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿದ್ದ ಗಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮೇಲಾಧಿಕಾರಿಗಳ ಆದೇಶದಂತೆ ಮಂಗಳವಾರದಿಂದ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಅರಣ್ಯ ಇಲಾಖೆಯ ಡಿಸಿಎಫ್ ರವೀಂದ್ರಕುಮಾರ್ ತಿಳಿಸಿದ್ದಾರೆ.ಉಬ್ರಾಣಿ ಹೋಬಳಿಯಲ್ಲಿನ ಕಾಡಂಚಿನಲ್ಲಿರುವ ಹಲವಾರು ಗ್ರಾಮಗಳ ರೈತರು ತಮ್ಮ ಹೊಲ, ಜಮೀನು, ತೋಟಗಳಿಗೆ ಹೋಗಲು ಭಯಪಡುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ. ಪ್ರತಿದಿನವು ತೋಟಗಳಲ್ಲಿರುವ ಕೊಳವೆಬಾವಿಯ ಪಂಪ್ ಸೆಟ್‌ಗಳು, ಬೆಳೆಗಳನ್ನು ಆನೆ ಹಾಳು ಮಾಡುತ್ತಿದೆ. ಇದನ್ನು ರೈತರು ಸಹಿಸಿಕೊಳ್ಳುತ್ತಲೇ ಅರಣ್ಯ ಇಲಾಖೆಗೆ ದೂರು ನೀಡುತ್ತಲೇ ಇದ್ದರು. ಈ ಬಗ್ಗೆ ಈ ಸಲಗವನ್ನು ಸೆರೆ ಹಿಡಿಯಲು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶದ ಮೇರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
ಕಳೆದ ಹಲವಾರು ವರ್ಷಗಳ ಹಿಂದೆ ಸೂಳೆಕೆರೆಯಲ್ಲಿ ಆನೆಯೊಂದು ನೀರಿಗೆ ಇಳಿದು ಸ್ನಾನ ಮಾಡುತ್ತಿದ್ದ ವಿಡಿಯೋಗಳನ್ನು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಾಗ ಮಾವಿನಕಟ್ಟೆ ವಲಯದ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿ ಈ ಆನೆಯನ್ನು ಬೇರೆ ಕಡೆ ಓಡಿಸಿದ್ದರು. ಈ ವ್ಯಾಪ್ತಿಯಲ್ಲಿ ಸಮೃದ್ಧವಾಗಿದ್ದ ಅರಣ್ಯ ಪ್ರದೇಶವೆಲ್ಲ ಬಟಾಬಯಲಾಗುತ್ತಿದೆ. ಪರಿಣಾಮ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಕಾಡಂಚಿನ ಜನವಸತಿ ಪ್ರದೇಶಗಳಿಗೆ ಲಗ್ಗೆ ಹಾಕುತ್ತಿವೆ. ಅರಣ್ಯ ಪ್ರದೇಶಗಳಿಂದ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಬಾರದಂತೆ ಚನ್ನಗಿರಿ ವಲಯ ಅರಣ್ಯ ಪ್ರದೇಶದ ಸುತ್ತಲೂ ಆನೆ ಕಂದಕವನ್ನು ತೊಡಿಸಲಾಗಿತ್ತು ಎಂದರು.
(ಬಾಕ್ಸ್) * ಸಲಗ ಸೆರೆಹಿಡಿಯಲು ತಾಂತ್ರಿಕ ತಜ್ಞರು, ಸಾಕಾನೆಗಳು ರೆಡಿ ಕಾಡಾನೆ ಸೆರೆಹಿಡಿದು ಬೇರೆ ಕಡೆಯ ಅಭಯಾರಣ್ಯಕ್ಕೆ ಬಿಡುವ ಉದ್ದೇಶದಿಂದ ಆನೆ ಕಾರ್ಯಾಚರಣೆ ತಂಡದಲ್ಲಿ ನುರಿತ ಪಶುವೈದ್ಯರಾದ ಡಾ.ಮುಜೀಬ್ ಉರ್ ರೆಹಮಾನ್, ಡಾ.ಮುರುಳಿ, ಶಿವಮೊಗ್ಗ ಬಳಿಯ ಸಕ್ರೆಬೈಲ್ ಆನೆ ಬಿಡಾರದ ಸಾಕಾನೆಗಳೊಂದಿಗೆ ಆನೆ ಹಿಡಿಯುವ ಎಲ್ಲ ತಾಂತ್ರಿಕತೆಯ ನುರಿತ ತಂಡದೊಂದಿಗೆ ಕಾಡಾನೆ ಸೆರೆಹಿಡಿದು ಅದಕ್ಕೆ ರೆಡಿಯೋ ಕಾಲರ್ ಕಟ್ಟಿ ಚಲನವಲನಗಳನ್ನು ಪರೀಕ್ಷಿಸಲು ಯೋಜಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರಾವತಿ, ಉಂಬ್ಳೆಬೈಲು, ಮಾವಿನಕಟ್ಟೆ, ಲಕ್ಕವಳ್ಳಿ ಮತ್ತು ತರೀಕೆರೆ ವಲಯಗಳ ಸಿಬ್ಬಂದಿ ಭಾಗವಹಿಸಿದ್ದಾರೆಂದು ಡಿಸಿಎಫ್ ರವೀಂದ್ರಕುಮಾರ್ ತಿಳಿಸಿದ್ದಾರೆ.
-14ಕೆಸಿಎನ್ಜಿ2: ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಗೆ ಬಂದಿರುವ ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದ ಸಾಕಾನೆಗಳು.