ಅಪರೇಷನ್ ಅಭ್ಯಾಸ್ ನಾಗರಿಕ ಸುರಕ್ಷಾ ಅಣಕು ಪ್ರದರ್ಶನ

KannadaprabhaNewsNetwork | Published : May 17, 2025 1:42 AM
Follow Us

ಸಾರಾಂಶ

ಚಿತ್ರದುರ್ಗದ ಪೊಲೀಸ್ ಪರೇಡ್ ಮೈದಾನದಲ್ಲಿ ಅಪರೇಷನ್ ಅಭ್ಯಾಸ್ ನಾಗರಿಕ ಸುರಕ್ಷಾ ಅಣಕು ಪ್ರದರ್ಶನ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ರೆಡ್‍ಕ್ರಾಸ್ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಸಹಯೋಗದೊಂದಿಗೆ, ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಂರಕ್ಷಣೆ ಮಾಡುವ ಕುರಿತು ಅಪರೇಷನ್ ಅಭ್ಯಾಸ್ ನಾಗರೀಕ ಸುರಕ್ಷಾ ಅಣಕು ಪ್ರದರ್ಶನ ನಡೆಸಲಾಯಿತು.

ಬಾಂಬ್ ಸ್ಪೋಟ, ಅಗ್ನಿ ಅವಘಡದಿಂದ ಉಂಟಾಗುವ ಅಪಾಯದ ಸನ್ನಿವೇಶವನ್ನು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೃಷ್ಟಿಸಲಾಗಿತ್ತು. ಮೈದಾನದಲ್ಲಿ ಬಾಂಬ್ ಸ್ಫೋಟಗೊಂಡ ಕೂಡಲೆ, ಅಲ್ಲಿ ನೆರೆದಿದ್ದ ಸಾರ್ವಜನಿಕರು, ಅಂಗಡಿಕಾರರು ಕೆಳಕ್ಕೆ ಬಿದ್ದು, ನರಳಾಡುತ್ತಿದ್ದ ದೃಶ್ಯ ಸೃಷ್ಟಿಸಲಾಯಿತು. ಬಾಂಬ್ ಸ್ಫೋಟದ ಶಬ್ಧ ಕೇಳಿ ಬಂದ ತಕ್ಷಣ ಸೈರನ್ ಮೊಳಗಿತು. ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಲಾಯಿತು. ಶ್ವಾನದಳದೊಂದಿಗೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಪೊಲೀಸ್ ಕವಾಯತು ಮೈದಾನದ ವಿವಿಧೆಡೆ ಪರಿಶೀಲನೆ ಆರಂಭಿಸಿತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಆರೋಗ್ಯ ಇಲಾಖೆ, ರೆಡ್‍ಕ್ರಾಸ್ ಸಂಸ್ಥೆಯ ತಂಡದ ಸದಸ್ಯರು ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ವೈದ್ಯಕೀಯ ತಂಡ ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ಆರಂಭಿಸಿತು.

ಪೊಲೀಸ್ ಇಲಾಖೆಯ ವಿಧ್ವಂಸಕ ತಡೆ ರಕ್ಷಣಾ ದಳ ಎಎಸ್‍ಸಿ ತಂಡ ಮತ್ತು ಶ್ವಾನದಳ ತಪಾಸಣೆ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ತಂಡ, ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳ ತಂಡ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಬೆಂಗಾವಲು ವಾಹನಗಳ ನಿಯೋಜನೆ, ಜೀರೋ ಟ್ರಾಫಿಕ್, ತಂಡಗಳು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಿದವು.

ರೆಡ್ ಕ್ರಾಸ್ ಸಂಸ್ಥೆಯಿಂದ ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಮಾಸ್ಕ್ ಗಳನ್ನು ವಿತರಿಸಲಾಯಿತು. ಅಣಕು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ವಿಕೋಪಗಳಿಂದ ಉಂಟಾಗುವ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಇಂತಹ ಸಂದರ್ಭಗಳಲ್ಲಿ ಕಡಿಮೆ ಸಮಯದಲ್ಲಿ ತುರ್ತಾಗಿ ಸ್ಪಂದನೆ ದೊರಕುವಂತಾಗಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‍ಪಿ ಪಿ.ಕೆ. ದಿನಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್‍ಪಿ ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಡಿಯುಡಿಸಿ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಎನ್‍ಸಿಸಿ, ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆಯ ಅನಂತ ರೆಡ್ಡಿ, ಅರುಣ್‍ಕುಮಾರ್, ಮಹಜರ್ ಉಲ್ಲಾ ಸೇರಿದಂತೆ ವಿವಿಧ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಇದ್ದರು.