ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದಲ್ಲಿ ನಾಲ್ಕು ಕಡೆ ತುರ್ತು ಸಂದರ್ಭದಲ್ಲಿ ನಾಗರಿಕರ ಸುರಕ್ಷತಾ ಕವಾಯತಿನ ಅಣುಕು ಪ್ರದರ್ಶನಕ್ಕೆ (ಮಾಕ್ ಡ್ರಿಲ್) ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಸಿದ್ಧತೆ ನಡೆಸಿದೆ.ಮೊದಲ ಹಂತದಲ್ಲಿ ಬುಧವಾರ ಬೆಂಗಳೂರಿನ ಎರಡು ಕಡೆ ''''''''ಆಪರೇಷನ್ ಅಭ್ಯಾಸ್''''''''(ಮಾಕ್ ಡ್ರಿಲ್) ಅಣುಕು ಪ್ರದರ್ಶನ ನಡೆಯಲಿದ್ದು, ಎರಡನೇ ಹಂತದಲ್ಲಿ ಮೈಸೂರು, ಮಂಡ್ಯ, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ.
ಕಾಶ್ಮೀರದ ಪಹಲ್ಗಾಂ ಭಯೋತ್ಪಾದನಾ ದಾಳಿ ನಂತರ ಪಾಕಿಸ್ತಾನದ ಜತೆಗೆ ಸಮರದ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಗರಿಕರ ರಕ್ಷಣಾ ತಾಲೀಮು ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿತ್ತು. ಅಂತೆಯೇ ರಾಜ್ಯದಲ್ಲಿ ಮಾಲ್ ಡ್ರಿಲ್‌ಗೆ ಸಿದ್ಧತೆ ನಡೆದಿದೆ.ಬೆಂಗಳೂರಿನ ಹಲಸೂರು ಕೆರೆ ಸಮೀಪದ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕೇಂದ್ರ ಕಚೇರಿಯ ಮೈದಾನ ಹಾಗೂ ಡೈರಿ ವೃತ್ತದ ಅಗ್ನಿಶಾಮಕ ದಳದ ತರಬೇತಿ ಕೇಂದ್ರದ ಮೈದಾನದಲ್ಲಿ ಅಣುಕು ಪ್ರದರ್ಶನ ನಡೆಯಲಿದೆ.
ಈ ಅಣುಕು ಪ್ರದರ್ಶನ ಕುರಿತು ಅಗ್ನಿಶಾಮಕದ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ನೇತೃತ್ವದಲ್ಲಿ ಮಂಗಳವಾರ ಪೂರ್ವ ಸಿದ್ಧತಾ ಸಭೆ ನಡೆಯಿತು. ಸಭೆ ಬಳಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಬೆಳಗ್ಗೆ 10 ಗಂಟೆಗೆ ಮೈದಾನದಲ್ಲಿ ಹಾಜರಿರುವಂತೆ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.ನಾಗರಿಕ ರಕ್ಷಣಾ ತಾಲೀಮು ಸಂಬಂಧ ಗೃಹ ಇಲಾಖೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿತು. ದೇಶದ ವ್ಯಾಪ್ತಿಯ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದ್ದು, ಈ ಪ್ರದರ್ಶನ ಮೂರು ಹಂತದಲ್ಲಿ ನಡೆಯಲಿದೆ. ಅಂತೆಯೇ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉತ್ತರ ಕನ್ನಡಜಿಲ್ಲೆಯ ಮಲ್ಲಪುರ, ರಾಯಚೂರು ಜಿಲ್ಲೆಯ ಶಾಂತಿನಗರ ಹಾಗೂ ಬೆಂಗಳೂರು ಅಣುಕು ಪ್ರದರ್ಶನಕ್ಕೆ ಆಯ್ಕೆಯಾಗಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರು ತಿಳಿಸಿದ್ದಾರೆ.
‘ಆಪರೇಷನ್ ಅಭ್ಯಾಸ’ ಹೆಸರಿನಲ್ಲಿ ಈ ಮಾಕ್ ಡ್ರಿಲ್ ನಡೆಯಲಿದೆ. ರಾಜ್ಯದಲ್ಲಿ ಮೊದಲ ಮಾಕ್ ಡ್ರಿಲ್ ಬೆಂಗಳೂರಿನ ಹಲಸೂರು ಕೆರೆ ಸಮೀಪದ ರಾಜ್ಯ ಅಗ್ನಿಶಾಮಕ ದಳದ ಕೇಂದ್ರ ಕಚೇರಿ ಆವರಣದ ಮೈದಾನದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮುಂದಿನ ಹಂತದಲ್ಲಿ ಆಯಾ ಜಿಲ್ಲಾಡಳಿತಗಳ ಸಹಕಾರದಲ್ಲಿ ಮೈಸೂರು, ರಾಯಚೂರು, ಉತ್ತರ ಕನ್ನಡ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಣುಕು ಪ್ರದರ್ಶನ ಆಯೋಜಿಸಲಾಗುತ್ತದೆ ಎಂದು ಡಿಜಿಪಿ ಪ್ರಕಟಣೆಯಲ್ಲಿ ಹೇಳಿದ್ದಾರೆ.ಬಾಕ್ಸ್...
ಏನೇನು ಪ್ರದರ್ಶನ1.ವಾಯು ದಾಳಿ ಎಚ್ಚರಿಕೆಯ ಸೈರನ್
2.ಕಟ್ಟಡಗಳಲ್ಲಿ ಅಗ್ನಿ ದುರಂತ3.ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ
4.ದಾಳಿಗೊಂಡ ಕಟ್ಟಡದಲ್ಲಿ ಗಾಯಗೊಂಡವರ ರಕ್ಷಣಾ ಕಾರ್ಯ5.ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ
6.ದಾಳಿಗೊಳಗಾದ ಸ್ಥಳಗಳಿಂದ ಜನರನ್ನು ಬೇರೆಡೆ ಸ್ಥಳಾಂತರ ಕಾರ್ಯಬಾಕ್ಸ್...
ಸೈರನ್‌ಗಳ ಪರಿಶೀಲನೆಪ್ರಾಕೃತಿಕ ವಿಕೋಪ ಹಾಗೂ ಅಪರಾಧ ಘಟನೆಗಳು ಸೇರಿ ತುರ್ತು ಸಂದರ್ಧದಲ್ಲಿ ಜನರಿಗೆ ಎಚ್ಚರಿಕೆ ನೀಡಲು ಪೊಲೀಸ್ ಹಾಗೂ ಅಗ್ನಿಶಾಮಕ ಠಾಣೆಗಳಲ್ಲಿ ಅಳವಡಿಸಿರುವ ಸೈರನ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ನಗರದಲ್ಲಿರುವ ರಕ್ಷಣಾ ಸಂಶೋಧನಾ ಕಚೇರಿ (ಡಿಆರ್‌ಡಿಓ) ಸೇರಿ ಪ್ರಮುಖ ಕಚೇರಿಗಳ ಕಟ್ಟಡಗಳಲ್ಲಿರುವ ಸೈರನ್‌ಗಳ ಕಾರ್ಯನಿರ್ವಹಣೆ ಕುರಿತು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.