ಮಂಗಳೂರಲ್ಲಿ ಬೀದಿಬದಿ ಅನಧಿಕೃತ ವ್ಯಾಪಾರ ವಿರುದ್ಧ ಟೈಗರ್ ಕಾರ್ಯಾಚರಣೆ

KannadaprabhaNewsNetwork | Published : Jul 30, 2024 12:40 AM

ಸಾರಾಂಶ

ಮಂಗಳೂರು ಮಹಾನಗರದಲ್ಲಿ ಫುಟ್‌ಪಾತ್‌ ಅತಿಕ್ರಮಣ ಸೇರಿದಂತೆ ಅನಧಿಕೃತವಾಗಿ ಬೀದಿಬದಿ ವ್ಯಾಪಾರ ಮಾಡುತ್ತಿರುವ ಅಂಗಡಿಗಳ ಮೇಲೆ ಪಾಲಿಕೆಯ ಟೈಗರ್ ಕಾರ್ಯಾಚರಣೆ ಸೋಮವಾರ ಆರಂಭವಾಗಿದೆ. ಮೊದಲ ದಿನ ನಾರಾಯಣಗುರು ವೃತ್ತದ ಬಳಿಯಿಂದ ಮಣ್ಣಗುಡ್ಡೆ ರಸ್ತೆ ಮತ್ತು ಕೆಪಿಟಿಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಅನಧಿ​ಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರದಲ್ಲಿ ಫುಟ್‌ಪಾತ್‌ ಅತಿಕ್ರಮಣ ಸೇರಿದಂತೆ ಅನಧಿಕೃತವಾಗಿ ಬೀದಿಬದಿ ವ್ಯಾಪಾರ ಮಾಡುತ್ತಿರುವ ಅಂಗಡಿಗಳ ಮೇಲೆ ಪಾಲಿಕೆಯ ಟೈಗರ್ ಕಾರ್ಯಾಚರಣೆ ಸೋಮವಾರ ಆರಂಭವಾಗಿದೆ. ಮೊದಲ ದಿನ

ನಾರಾಯಣಗುರು ವೃತ್ತದ ಬಳಿಯಿಂದ ಮಣ್ಣಗುಡ್ಡೆ ರಸ್ತೆ ಮತ್ತು ಕೆಪಿಟಿಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಅನಧಿ​ಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಯಿತು.

ಮೊದಲಿಗೆ ಲೇಡಿಹಿಲ್ ಬಳಿ ಸುಮಾರು 25-30 ಅಂಗಡಿಗಳನ್ನು ಬೀದಿಬದಿಯಿಂದ ತೆರವುಗೊಳಿಸಲಾಯಿತು. ಕಾರ್ಯಾಚರಣೆ ವೇಳೆ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಅವರನ್ನು ಬರ್ಕೆ ಠಾಣೆ ಪೊಲೀಸರು ವಶಕ್ಕೆ ಪಡೆದರು. ನಂತರ ಯೆಯ್ಯಾಡಿಯಲ್ಲಿ ಕೂಡ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತವಾಯಿತು. ಕಂಕನಾಡಿ ಗ್ರಾಮಾಂತರ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು. ಬೊಂಡ, ಫಾಸ್ಟ್ ಫುಡ್, ಜ್ಯೂಸ್, ಪಾನಿಪುರಿ, ಆಮ್ಲೆಟ್ ಅಂಗಡಿಗಳನ್ನು ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ.

ಈ ವೇಳೆ ಮಾತನಾಡಿದ ಪಾಲಿಕೆ ವಲಯ ಆಯುಕ್ತೆ ರೇಖಾ ಜೆ.ಶೆಟ್ಟಿ, ವ್ಯಾಪಾರಿಗಳಿಗೆ ತಳ್ಳುಗಾಡಿಯಲ್ಲಿ ಮಾರಾಟ ಮಾಡಲು ಅಥವಾ ತಲೆಯಲ್ಲಿ ಹೊತ್ತುಕೊಂಡು ಹೋಗಿ ಮಾರಾಟ ಮಾಡಲು ಮಾಡಲು ಮಾತ್ರ ಅನುಮತಿ ನೀಡಲಾಗಿದೆ. ಒಂದೇ ಕಡೆಯಲ್ಲಿ ನೆಲೆ ನಿಂತು ಮಾರಾಟ ಮಾಡಲು ಅವಕಾಶವಿಲ್ಲ. ಮೊದಲ ದಿನ ಲೇಡಿಹಿಲ್‌ ಮತ್ತು ಕೆಪಿಟಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಪ್ರತಿಭಟನೆ ನಡೆಸಿದವರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಇತರೆಡೆಯಲ್ಲೂ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಕಂದಾಯ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.............

ಮೇಯರ್‌ ಅವರ ಸರ್ವಾಧಿಕಾರಿ ತೀರ್ಮಾನದಂತೆ ಅಧಿಕಾರಿಗಳು ಬಡ ಬೀದಿಬದಿ ವ್ಯಾಪಾರಿಗಳ ಗೂಡಂಗಡಿಗಳನ್ನು, ಅದರಲ್ಲಿದ್ದ ಸಾಮಾನುಗಳನ್ನು ನಾಶ ಮಾಡಿದ್ದಾರೆ. ಜೆಸಿಬಿ ಬಳಸಿರುವುದು 2014ರ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ಅಧಿನಿಯಮಕ್ಕೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು.- ಬಿ.ಕೆ. ಇಮ್ತಿಯಾಜ್‌, ಗೌರವಾಧ್ಯಕ್ಷ, ಬೀದಿಬದಿ ವ್ಯಾಪಾರಿಗಳ ಸಂಘ

Share this article