- ಸಕ್ರೆ ಬೈಲಿನಿಂದ 4 ಆನೆ, ಕುಶಾಲ ನಗರದಿಂದ 3 ಆನೆ ಆಗಮನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೆಲವು ತಿಂಗಳಿಂದಲೂ ತಾಲೂಕಿನಲ್ಲಿ ಕಾಡಾನೆಗಳ ಕಾಟ ಹೆಚ್ಚಿದ್ದು ಒಂಟಿ ಆನೆ ಇಬ್ಬರನ್ನು ತುಳಿದು ಸಾಯಿಸಿದ ಹಿನ್ನೆಲೆಯಲ್ಲಿ ಈ ಆನೆಯನ್ನು ಹಿಡಿಯುವ ಕಾರ್ಯಾಚರಣೆ ಸೋಮವಾರ ನಡೆಯಲಿದೆ.
ಕಡಹಿನಬೈಲು ಗ್ರಾಮ ಪಂಚಾಯಿತಿ , ಮೆಣಸೂರು ಗ್ರಾಮ ಪಂಚಾಯಿತಿ ಹಾಗೂ ಸೀತೂರು ಗ್ರಾಮ ಪಂಚಾಯಿತಿ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಕೆಲವು ತಿಂಗಳಿಂದಲೂ ಒಂಟಿ ಆನೆಯೊಂದು ಸುತ್ತಾಡುತ್ತಾ ರಾತ್ರಿ ಹೊತ್ತಿ ನಲ್ಲಿ ತೋಟಗಳಿಗೆ ನುಗ್ಗಿ ಅಡಕೆ, ಬಾಳೆ, ತೆಂಗಿನ ಗಿಡಗಳನ್ನು ತಿಂದು ಹಾಕುತ್ತಿತ್ತು. ಕೆಲವು ತಿಂಗಳ ಹಿಂದೆ ಸೀತೂರು ಗ್ರಾಮದ ಕೆರೆಗದ್ದೆಯ ಉಮೇಶ, ಮಡಬೂರು ಗ್ರಾಮದ ಎಕ್ಕಡಬೈಲಿನ ವರ್ಗೀಸ್ ಎಂಬ ರೈತನನ್ನು ಒಂಟಿ ಸಲಗ ಸಾಯಿಸಿತ್ತು. ಈಗ ಸುತ್ತಾಡುತ್ತಿರುವ ಈ ಒಂಟಿ ಸಲಗ ಅದೇ ಇರಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.ಪುಂಡ ಆನೆಯನ್ನು ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂಬ ರೈತರ ಒತ್ತಡದಿಂದ ಶಾಸಕ ರಾಜೇಗೌಡ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಬೇಟಿಯಾಗಿ ಪುಂಡ ಆನೆ ಹಿಡಿಯುವಂತೆ ಮನವಿ ಸಲ್ಲಿಸಿದ್ದರು. ಅರಣ್ಯ ಸಚಿವರ ಆದೇಶದಂತೆ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಸುತ್ತಾಡುತ್ತಿರುವ ಪುಂಡ ಆನೆಯನ್ನು ಹಿಡಿಯಲು ಸಿದ್ಧತೆ ಕಾರ್ಯ ಪ್ರಾರಂಭವಾಗಿದ್ದು ಈ ಕಾರ್ಯಾಚರಣೆಯಲ್ಲಿ ಒಟ್ಟು 7 ಕಾಡಾನೆಗಳು ಪಾಲ್ಗೊಳ್ಳಲಿದೆ. ಬಾನುವಾರ ಸಂಜೆ ಸಕ್ರೆ ಬೈಲಿನಿಂದ ಲಾರಿ ಮೂಲಕ 4 ಆನೆಗಳು, ಕುಶಾಲ ನಗರದಿಂದ 3 ಆನೆಗಳು ಬಂದಿವೆ.
ಪುಂಡ ಆನೆ ಹಿಡಿಯಲು ಗಾಂಧಿ ಗ್ರಾಮಕ್ಕೆ ಆಗಮಿಸಿದ ಸಕ್ರೆಬೈಲಿನ ಆನೆಗಳನ್ನು ನೋಡಲು ನೂರಾರು ಗ್ರಾಮಸ್ಥರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಡಿಎಫ್ ಓ. ಶಿವಶಂಕರ್, ಎಸಿಎಫ್ ಬಾಬು ರಾಜೇಂದ್ರ ಪ್ರಸಾದ್, ವಲಯ ಅರಣ್ಯಾಧಿ ಕಾರಿ ಪ್ರವೀಣ್, ಆದರ್ಶ್ ಹಾಗೂ ಇತರ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು. ಸ್ಥಳಕ್ಕೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಭೇಟಿ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.-- ಬಾಕ್ಸ್ --
ಕುಪ್ಪೂರಿನ ಆಸು ಪಾಸಿನಲ್ಲಿ ಅಡಗಿದೆ ಆನೆಪುಂಡ ಆನೆ ಇರುವ ಜಾಗವನ್ನು ಗುರುತಿಸಲಾಗಿದ್ದು ಮಡಬೂರು ಗ್ರಾಮದ ಕುಪ್ಪೂರಿನ ಆಸು ಪಾಸಿನಲ್ಲಿ ಆನೆ ಅಡಗಿದೆ. ಅಲ್ಲಿಗೆ 7 ಸಾಕಿದ ಆನೆಗಳು ಹೋಗಲಿವೆ. ಪ್ರತಿ ಒಂದು ಆನೆಗೆ 3 ಮಾವುತರಿದ್ದಾರೆ. ಶಿವಮೊಗ್ಗದಿಂದ ಆಗಮಿಸಲಿರುವ ಪಶು ವೈದ್ಯರು, ಅರವಳಿಕೆ ತಜ್ಞರು, ಶಾರ್ಟ ಶೂಟರ್ ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಒಂಟಿ ಆನೆಗೆ ಮತ್ತು ಬರುವ ಔಷಧಿ ಸಿಂಪರಣೆ ಮಾಡಿ ಆನೆ ಸೆರೆ ಹಿಡಿಯಲಿದ್ದಾರೆ. ನಂತರ ಒಂಟಿ ಸಲಗವನ್ನು ಎಲ್ಲಿಗೆ ಬಿಡಬಹುದು ಎಂಬ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
-- ಬಾಕ್ಸ್ --ಕಾರ್ಯಾಚರಣೆಗೆ ಗ್ರಾಮಸ್ಥರು ಸಹಕಾರ ನೀಡಿ
ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ತಿಂಗಳಿಂದಲೂ ಪುಂಡ ಆನೆ ಕಡಹಿನಬೈಲು, ಮೆಣಸೂರು, ಸೀತೂರು ಗ್ರಾಪಂ ನ ಹಲವು ಗ್ರಾಮಗಳಲ್ಲಿ ಸುತ್ತಾಡಿ ಜನರನ್ನು ಗಾಬರಿಗೊಳಿಸಿತ್ತು. ಗ್ರಾಮಸ್ಥರ ಬೇಡಿಕೆಯಂತೆ ಶಾಸಕ ಟಿ.ಡಿ.ರಾಜೇಗೌಡರು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಆನೆ ಸೆರೆ ಹಿಡಿಯಲು ಆದೇಶಿಸಿದ್ದರು. ಭಾನುವಾರ ಸಂಜೆ ಗಾಂಧಿಗ್ರಾಮಕ್ಕೆ ಈಗಾಗಲೇ ಸಕ್ರೆಬೈಲಿನಿಂದ 4 ಆನೆ ಬಂದಿದ್ದು ರಾತ್ರಿ ನಗರದಿಂದ 3 ಆನೆ ಬರಲಿದೆ. ಸೋಮವಾರ ಬೆಳಿಗ್ಗೆಯಿಂದ ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಲಿದ್ದು ಎಲ್ಲಾ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.-- ಬಾಕ್ಸ್--
ನೂರಾರು ಎಕರೆ ತೋಟ ಹಾಳುಮಾಡಿದ ಕಾಡಾನೆಪುಂಡಾನೆ ಕಡಹಿನಬೈಲು ಗ್ರಾಪಂನ ನೇರ್ಲೆಕೊಪ್ಪ, ಆಲಂದೂರು, ಗಾಂಧಿಗ್ರಾಮ, ಬಾಳೆ ಮನೆ, ಕೊರಲಕೊಪ್ಪ, ಗರ್ನ ಕೊಪ್ಪ, ಮಳಲಿ, ಮೆಣಸೂರು ಗ್ರಾಮ ಪಂಚಾಯಿತಿ ಬಡಗಬೈಲು, ಗುಡ್ಡದಮನೆ, ದ್ವಾರಮಕ್ಕಿ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮಡಬೂರು, ಎಕ್ಕಡಬೈಲು, ಕುಪ್ಪೂರು, ಸೀತೂರು ಗ್ರಾಮ ಪಂಚಾಯಿತಿ ಹಾತೂರು, ಮಲ್ಲಂದೂರು ಭಾಗದಲ್ಲಿ ಸುತ್ತಾಡಿದ್ದು ನೂರಾರು ಎಕ್ರೆ ತೋಟ ಹಾಳು ಮಾಡಿದೆ. ಇಬ್ಬರನ್ನು ಬಲಿಪಡೆದುಕೊಂಡಿದೆ.