ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ತಳಮಟ್ಟದಲ್ಲಿ ಆಗಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.
ಜೆಡಿಎಸ್ ಕಾರ್ಯಾಲಯದಲ್ಲಿ ಪಕ್ಷದ 7 ತಾಲೂಕುಗಳ ಪದಾಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ತಳಮಟ್ಟದಲ್ಲಿ ಆಗಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು. ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲೆಯ ಏಳು ತಾಲೂಕುಗಳ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಲೋಕಾಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯಾಗಿದೆ. ಈ ಹೊಂದಾಣಿಕೆ ತಳಮಟ್ಟದಲ್ಲೂ ಆಗಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯ ವಾಗಿದೆ. ಇಂದಿನ ಸಭೆಯಲ್ಲಿ ಕ್ರೂಢಿಕೃತವಾದ ಪದಾಧಿಕಾರಿಗಳ ಅಭಿಪ್ರಾಯವನ್ನು ಸೋಮವಾರ ಬೆಂಗಳೂರಲ್ಲಿ ನಡೆಯಲಿರುವ ರಾಜ್ಯ ಕೋರ್ ಕಮಿಟಿ ಸಭೆಗೆ ಮುಟ್ಟಿಸುತ್ತೇನೆ. ನಂತರ ಜಿಲ್ಲೆಯಲ್ಲಿ ಮುಂದಿನ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇವೆ ಎಂದರು. ಹೊಂದಾಣಿಕೆ ಎಂದ ಮೇಲೆ ನಮ್ಮಿಂದ ಕಾರ್ಯಕರ್ತರು ಬಹಳ ನಿರೀಕ್ಷೆ ಮಾಡುತ್ತಾರೆ. ಹೊಂದಾಣಿಕೆ ಆದ ಕೂಡಲೆ ಇನ್ನೊಂದು ಪಕ್ಷಕ್ಕೆ ಸಂಪೂರ್ಣ ಮಾರ್ಟಿಗೇಜ್ (ಅಡಮಾನ) ಮಾಡಿಕೊಂಡಂತೆ ಅಲ್ಲ. ಈಗಿನ ಹೊಂದಾಣಿಕೆ ಲೋಕಸಭಾ ಚುನಾವಣೆಗೆ ಸೀಮಿತವಾಗಿದೆ. ತದನಂತರ ಮುಂದಿನ ಚುನಾವಣೆಗಳಿಗೆ ಯಾವ ರೀತಿ ಹೊಂದಾಣಿಕೆ ಆಗಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಹೇಳಿದರು. ಸದ್ಯಕ್ಕೆ ಪಕ್ಷ ಸಂಘಟನೆಯೇ ನಮ್ಮ ಮುಖ್ಯ ಉದ್ದೇಶ. ಜಿಲ್ಲೆಯ 7 ತಾಲೂಕಲ್ಲಿ ಪಕ್ಷ ಪ್ರಬಲವಾಗಿದೆ. ಎಲ್ಲೋ ಒಂದು ಕಡೆ ಪಕ್ಷದ ನಾಯಕತ್ವದ ಕೊರತೆ ಕಾಡುತ್ತಿದೆ. ಹೀಗಾಗಿ ಪಕ್ಷದ ನಾಯಕತ್ವಕ್ಕೆ ಚಾಲನೆ ಕೊಡಬೇಕಿದೆ. ಮೂಡಿಗೆರೆ, ಶೃಂಗೇರಿ, ಕಡೂರು ಸೇರಿ ಎಲ್ಲ ತಾಲೂಕಲ್ಲಿ ಪಕ್ಷದ ಮತದಾರ ಗಟ್ಟಿಯಾಗಿ ನೆಲೆಯೂರಿದ್ದಾನೆ ಎಂದರು. ಲೋಕಸಭಾ ಚುನಾವಣೆ ಈಗಾಗಲೆ ಹತ್ತಿರ ಬರುತ್ತಿದೆ. ಜಿಲ್ಲಾ ಮಟ್ಟದಿಂದ ಬೂತ್ ಮಟ್ಟದವರೆಗೆ ಪಕ್ಷ ಸಂಘಟನೆ ಮಾಡಲಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಸರ್ಕಾರ ಬಂದರೂ ಕೊಡಲೇಬೇಕು ಈ ಬಗ್ಗೆ ನಮ್ಮ ಟೀಕೆಯಿಲ್ಲ ಎಂದರು. ಕಳೆದ 8 ತಿಂಗಳಿಂದ ರಾಜ್ಯ ಸರ್ಕಾರ ಅಧಿಕಾರ ಮಾಡುತ್ತಿದೆ. ಯಾವುದೇ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ ಎಂದು ಪದಾಧಿಕಾರಿಗಳು ಇಂದು ಗಮನಕ್ಕೆ ತಂದಿದ್ದಾರೆ. ಕಂದಾಯ , ಸರ್ವೆ, ಅರಣ್ಯ ಸೇರಿ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಟೀಕಿಸಿತ್ತು. ಆದರೆ, ಇಂದು ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಆಗದೇ ಇರುವುದರಿಂದ ಲಂಚಾವತಾರ 60 ಪರ್ಸೆಂಟ್‌ಗೆ ಮುಟ್ಟಿದೆ ಎಂದು ಆರೋಪಿಸಿದರು. ಒಂದು ಕಡೆ ಬರಗಾಲ, ಇನ್ನೊಂದು ಕಡೆ ಸರಕಾರ ಅಭಿವೃದ್ಧಿಗೆ ಒತ್ತು ಕೊಡುತ್ತಿಲ್ಲ. ಜನರ ಕೈಗೆ ಕೆಲಸವಿಲ್ಲ. ಈ ಸಂದರ್ಭದಲ್ಲಿ ಜನರ ವಿರುದ್ಧವಾದ ಯೋಜನೆಗಳು, ದಬ್ಬಾಳಿಕೆ ಹಾಗೂ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ಪಕ್ಷ ನಿರ್ಧರಿಸಿದೆ ಎಂದರು. ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಮುಖಂಡರಾದ ಮಂಜಪ್ಪ, ಜಿ.ಎಸ್.ಚಂದ್ರಪ್ಪ, ದೇವಿಪ್ರಸಾದ್, ಶ್ರೀದೇವಿ, ಜಗದೀಶ್, ಸಿ.ಕೆ.ಮೂರ್ತಿ, ಗಂಗಾಧರನಾಯ್ಕ, ಚಂದ್ರು ಉಪಸ್ಥಿತರಿದ್ದರು.
4 ಕೆಸಿಕೆಎಂ 1 ಚಿಕ್ಕಮಗಳೂರಿನ ಜೆಡಿಎಸ್ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.