ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ: ಸಚಿವ ಮಂಕಾಳ ಎಸ್‌.ವೈದ್ಯ

KannadaprabhaNewsNetwork | Published : Oct 7, 2023 2:15 AM

ಸಾರಾಂಶ

ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ: ಸಚಿವ ಮಂಕಾಳ ಎಸ್‌.ವೈದ್ಯ
- ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ ಪಕ್ಷದ ಶಾಸಕರ, ಮುಖಂಡರ ಹಾಗೂ ಪ್ರಮುಖರ ಸಭೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಅವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ನಿಮ್ಮಿಂದಾಗಬೇಕು ಎಂದು ಕೆಪಿಸಿಸಿ ವೀಕ್ಷಕ, ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ಎಸ್.ವೈದ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಡೆದ ಪಕ್ಷದ ಶಾಸಕರು, ಮುಖಂಡರು, ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ ಅಂತಿಮ ಆಗುವವರೆಗೆ ಆ ವಿಚಾರದಲ್ಲಿ ಸಾಮಾಜಿಕ ತಾಣಗಳು, ಪತ್ರಿಕೆಗಳಿಗೆ ಹೇಳಿಕೆಗಳನ್ನು ಕೊಡುವಂತಿಲ್ಲ ಎಂದು ಕೆಪಿಸಿಸಿ ಸೂಚನೆ ಇದೆ, ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. ಈಗಾಗಲೇ ಉಡುಪಿ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಲಾಗಿದೆ. ಲೋಕಸಭೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಅಲ್ಲಿನವರು ಭರವಸೆ ನೀಡಿದ್ದಾರೆ. ಸಧ್ಯದಲ್ಲೇ ಎರಡೂ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಸಮಾಲೋಚಿಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು. ಒಮ್ಮತದ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡುತ್ತೇವೆ. ಎಲ್ಲರೂ ಸೇರಿ ಅವರನ್ನು ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ನಮಗೂ ಇದೆ. ಜನರಿಗೆ ಸಾಕಷ್ಟು ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇವೆ. ಇನ್ನೂ ಹಲವು ಸವಲತ್ತುಗಳನ್ನು ಕೊಡಲು ತಯಾರಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಹೇಳಿದರು. ಈ ಎಲ್ಲಾ ಕಾರಣಗಳಿಂದಾಗಿ ಲೋಕಸಭಾ ಚುನಾವಣೆಗೆ ಜನರ ಮುಂದೆ ಹೋಗಲು ನಮಗೆ ಯಾವುದೇ ಮುಜುಗರವಿಲ್ಲ. ನಮ್ಮ ಗ್ಯಾರಂಟಿ ಕಾರ್ಯಕ್ರಮ ತಲುಪಿದೆಯೇ ಎಂದು ಕೇಳಿ ಮತಯಾಚಿಸ ಬಹುದಾಗಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಎಲ್ಲರ ಪ್ರಯತ್ನದಿಂದ ಜಿಲ್ಲೆ ಸಂಘಟನೆ ವಿಚಾರದಲ್ಲಿ ರಾಜ್ಯದ ಗಮನ ಸೆಳೆದಿದೆ. ಲೋಕಸಭೆ ಚುನಾವಣೆ ಸಂಬಂಧ ಕೆಲವು ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಸಭೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ 5 ಜನ ಶಾಸಕರು ಅತ್ಯಂತ ಕ್ರಿಯಾಶೀಲರಾಗಿ, ಕಾರ್ಯಕರ್ತರು, ಪಕ್ಷದೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಬಿಜೆಪಿ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲ ಮುಖಂಡರು, ಕಾರ್ಯಕರ್ತರದ್ದಾಗಿದೆ. ಪರಿಷತ್ ಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆಗಳೂ ಸಹ ಬರುವುದಿದೆ. ಮತದಾರರ ವಿಶ್ವಾಸ ಗಳಿಸಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಕಡೂರು ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗಿಂತ 20 ಸಾವಿರ ಮತಗಳನ್ನು ಹೆಚ್ಚಿಗೆ ಪಡೆದಿದ್ದೇವೆ. ಇದನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೆ ಏರಿಸುವ ಸಲುವಾಗಿ ಈ ನಿಮಿಷದಿಂದ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಮುಖಂಡರಾದ ಡಾ. ಬಿ.ಎಲ್.ಶಂಕರ್, ಮೋಟಮ್ಮ, ಡಿ.ಕೆ.ತಾರಾದೇವಿ, ಬಿ.ಎಲ್.ರಾಮದಾಸ್, ಶಾಸಕರಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಎಂ.ಸಿ.ಶಿವಾನಂದಸ್ವಾಮಿ, ಕೆಪಿಸಿಸಿ ಕಿಸಾನ್‌ ಸೆಲ್‌ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಉಪಸ್ಥಿತರಿದ್ದರು. --ಬಾಕ್ಸ್‌-- ಕೇವಲ 5 ಗ್ಯಾರಂಟಿಗಳಿಗೆ ನಮ್ಮ ಕಾರ್ಯಕ್ರಮಗಳು ಸೀಮಿತವಲ್ಲ. ಎಲ್ಲಾ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನಷ್ಟು ಯೋಜನೆ ನೀಡುವವರಿದ್ದೇವೆ. ಈಗಾಗಲೇ ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ತಿಂಗಳು 100 ಕೋಟಿ ರು.ನಷ್ಟು ಅನುದಾನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮಂಕಾಳ ಎಸ್‌.ವೈದ್ಯ ಸಚಿವ 6 ಕೆಸಿಕೆಎಂ 1 ಚಿಕ್ಕಮಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಪಕ್ಷದ ಶಾಸಕರು, ಮುಖಂಡರು, ಪ್ರಮುಖರ ಸಭೆಯಲ್ಲಿ ಸಚಿವ ಮಂಕಾಳ ಎಸ್‌. ವೈದ್ಯ ಮಾತನಾಡಿದರು.

Share this article