ರೈಲ್ವೆ ನೇಮಕಾತೀಲಿ ಕನ್ನಡಕ್ಕೆ ಅವಕಾಶ ಸ್ವಾಗತಾರ್ಹ

KannadaprabhaNewsNetwork | Published : Oct 5, 2024 1:35 AM

ಸಾರಾಂಶ

ಕನಕಪುರ: ರೈಲ್ವೆ ನೇಮಕಾತಿಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಕೇಂದ್ರ ಸರ್ಕಾರ ಆದೇಶಿಸಿದ್ದು ಇದು ಕನ್ನಡಿಗರಿಗೆ ಸಿಕ್ಕ ಅಭೂತಪೂರ್ವ ಗೆಲುವಾಗಿದೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಗತಿಪರ ಸಂಘಟನೆ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.

ಕನಕಪುರ: ರೈಲ್ವೆ ನೇಮಕಾತಿಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಕೇಂದ್ರ ಸರ್ಕಾರ ಆದೇಶಿಸಿದ್ದು ಇದು ಕನ್ನಡಿಗರಿಗೆ ಸಿಕ್ಕ ಅಭೂತಪೂರ್ವ ಗೆಲುವಾಗಿದೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಗತಿಪರ ಸಂಘಟನೆ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಇದುವರೆಗೂ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಬೇಕಾದ ಸಂದಿಗ್ಧ ಪರಿಸ್ಥಿತಿಯಿತ್ತು. ಇದರಿಂದ ಕನ್ನಡಿಗ ಅಭ್ಯರ್ಥಿಗಳು ಶತಮಾನದಿಂದ ವಂಚನೆಗೆ ಒಳಗಾಗಿ ನಲುಗುತ್ತಿದ್ದರು. ಕೇಂದ್ರ ಸರ್ಕಾರದ ತೀರ್ಮಾನ ಸ್ವಾಗತಾರ್ಹವಾಗಿದ್ದು, ಇದರ ಜೊತೆಗೆ ಕನ್ನಡಿಗರಿಗೆ ಅತಿ ಹೆಚ್ಚು ಹುದ್ದೆಗಳನ್ನು ಮೀಸಲಿಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವಂತೆ ಆಗ್ರಹಿಸಿದರು,

ಈ ಹಿಂದೆ ಜಾಫರ್ ಷರೀಪ್, ಚಂದ್ರಶೇಖರ್ ಮೂರ್ತಿ, ಮಲ್ಲಿಕಾರ್ಜುನ ಖರ್ಗೆ ಕೂಡ ಕರ್ನಾಟಕದಿಂದ ಸಂಸದರಾಗಿ ಕೇಂದ್ರ ರೈಲ್ವೆ ಖಾತೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರೂ ಈಡೇರಿಸಲಾಗದ ಭರವಸೆಯನ್ನು ವಿ ಸೋಮಣ್ಣ ಈಡೇರಿಸಿದ್ದು ಶ್ಲಾಘನೀಯವಾಗಿದೆ. ಈ ಒಂದು ಅವಕಾಶಕ್ಕಾಗಿ ಹಲವು ಕನ್ನಡಪರ ಹೋರಾಟಗಾರರು ಹೋರಾಟ ಮಾಡಿ ಹಲವು ಕೇಸ್ ಹಾಕಿಸಿಕೊಂಡು ಜೈಲಿಗೆ ಹೋಗಿ ಬಂದಿದ್ದರು. ಅವರೆಲ್ಲರ ಪಾತ್ರ ಅವಿಸ್ಮರಣೀಯ. ಎಚ್‌.ಡಿ. ದೇವೆಗೌಡರು ಪ್ರಧಾನಿಯಾಗಿದ್ದಾಗ ಘೋಷಣೆಯಾಗಿದ್ದ ಬೆಂಗಳೂರು-ಸತ್ಯಮಂಗಲ ರೈಲು ಮಾರ್ಗದ ಕಾಮಗಾರಿ ನೆನಗುದಿಗೆ ಬಿದ್ದಿದ್ದು, ಆ ಕನಸನ್ನು ಕೂಡ ವಿ.ಸೋಮಣ್ಣನವರೇ ನನಸು ಮಾಡಲಿ ಎಂದರು.

ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರೈಲ್ವೆ ನೇಮಕಾತಿಯಲ್ಲಿ ದಕ್ಷಿಣ ಭಾರತದ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವ ಅಗತ್ಯವಿದೆ. ಸಾಮಾನ್ಯ ರೈತರ ಮಕ್ಕಳೂ ಕೂಡ ಕನ್ನಡದಲ್ಲಿ ಪರೀಕ್ಷೆ ಬರೆದು ಕೇಂದ್ರ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಗಳನ್ನಾಗಿ ನೋಡುವುದು ಬಹಳ ಸಂತೋಷ ವಿಷಯ ಎಂದರು.

ಭಾಸ್ಕರ್, ಕರ್ನಾಟಕ ಸಂಘದ ಉಪಾಧ್ಯಕ್ಷ ಸ್ಟುಡಿಯೋ ಚಂದ್ರು, ಕೆ ಆರ್ ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ, ಸಾಮಾಜಿಕ ಹೋರಾಟಗಾರ ಚೀರಣಕುಪ್ಪೆ ರಾಜೇಶ್, ರೈತ ಸಂಘದ ನವೀನ್ ಉಪಸ್ಥಿತರಿದ್ದರು.

Share this article