ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಹುನ್ನಾರ ನಡೆಯುತ್ತಿದ್ದು, ಇದರಿಂದ ಮೀನುಗಾರರಿಗೆ ಬಹಳ ದೊಡ್ಡ ಅನ್ಯಾಯ ಆಗುತ್ತಿದೆ. ಇದನ್ನು ಕಾಸರಕೋಡ ಭಾಗದ ಜನರು ಮಾತ್ರವಲ್ಲ ಜನಪರ ಕಾಳಜಿ ಇರುವ ಕರ್ನಾಟಕದ ಎಲ್ಲ ಜನರೂ ವಿರೋಧಿಸಬೇಕು ಎಂದು ಚಿತ್ರನಟ ಚೇತನ್ ಹೇಳಿದರು.
ಶ್ರೀಮಂತರ ಜೇಬು ತುಂಬಿಸುವ ಯೋಜನೆ: ಖಾಸಗಿಯವರ ಸಹಭಾಗಿತ್ವದಲ್ಲಿ ಹೊನ್ನಾವರದಲ್ಲಿ ಪೋರ್ಟ್ ನಿರ್ಮಿಸಿ ಇಲ್ಲಿನ ಜನಜೀವನ ನಾಶ ಮಾಡಿ ಶ್ರೀಮಂತರ ಜೇಬು ತುಂಬಿಸುವ ಕೆಲಸ ಆಗುತ್ತಿದೆ. ಇಲ್ಲಿನ ಮಹಿಳೆಯರು ಸೇರಿ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸಿ ಮಾನಸಿಕ, ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಇವರೆಲ್ಲ ಜನಪರ ಹೋರಾಟ ಮಾಡಿದವರು. ಅವರು ಬದುಕಿಗಾಗಿ ಸಂವಿಧಾನಾತ್ಮಕ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ದೌರ್ಜನ್ಯ ಮಾಡುತ್ತಿದ್ದಾರೆ. ಈ ಯೋಜನೆ ಸಂಪೂರ್ಣವಾಗಿ ಕೈಬಿಡಬೇಕು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ನಾನು ಕೂಡ ಈ ಹೋರಾಟಕ್ಕೆ ಬೆಂಬಲಿಸಿ ಇಲ್ಲಿನ ಜನರ ಪರ ನಿಲ್ಲುತ್ತೇನೆ ಎಂದರು.
ಮೀನುಗಾರ ಮುಖಂಡರಾದ ಗಣಪತಿ ತಾಂಡೇಲ್, ರಾಜೇಶ್ ತಾಂಡೇಲ್, ರಾಜು ತಾಂಡೇಲ್, ಮೀನುಗಾರರು ಇದ್ದರು.