-ಕೆಪಿಸಿಸಿ ನಾಯಕ ಡಿ. ಬಸವರಾಜ ವ್ಯಂಗ್ಯ । ರಾಜಕೀಯ ಲಾಭಕ್ಕಾಗಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಗಿಮಿಕ್‌ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಕೈಗೊಂಡಿರುವ ಬಳ್ಳಾರಿ ಪಾದಯಾತ್ರೆ ಸಂಪೂರ್ಣ ಸತ್ವಹೀನವಾಗಿದ್ದು, ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಇಂತಹ ಪಾದಯಾತ್ರೆಗೆ ಜನತೆ ಸೊಪ್ಪು ಹಾಕುವುದಿಲ್ಲ, ಗಂಭೀರವಾಗಿಯೂ ಪರಿಗಣಿಸುವುದಿಲ್ಲ ಎಂದರು.
ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ಹೋಗಲು, ಜನರ ಮುಂದೆ ಹೋಗುವುದಕ್ಕೆ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಮುಖವೇ ಇಲ್ಲ. ಹಾಗಾಗಿಯೇ ಎರಡೂ ವಿಪಕ್ಷಗಳು ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿವೆ. ಇಂತಹ ಕುಂಟು ನೆಪದ, ವಾಮಮಾರ್ಗದ ನೆಪವನ್ನು ರಾಜ್ಯದ ಜನತೆ ಒಪ್ಪುವುದೂ ಇಲ್ಲ.ಪಾದಯಾತ್ರೆ ಮಾಡಿ, ಏನೋ ಸಾಧಿಸಿಬಿಡುತ್ತೇವೆಂಬ ಭ್ರಮೆಯಲ್ಲಿ ಇರುವ ಬಿಜೆಪಿ-ಜೆಡಿಎಸ್ ನಾಯಕ ಅಂತಹ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದು ಅವರು ಹೇಳಿದರು.
ಇಂತಹ ಕುಂಟುನೆಪದ ವಾಮಮಾರ್ಗದ ನೆಪ ರಾಜ್ಯದ ಜನತೆ ಒಪ್ಪುವುದಿಲ್ಲ. ಅಲ್ಲದೇ ಅವರ ಪ್ರಯತ್ನ ಫಲ ನೀಡುವುದಿಲ್ಲ. ಅಧಿಕಾರದಲ್ಲಿದ್ದಾಗ ಬಿಜೆಪಿ-ಜೆಡಿಎಸ್ ಪಕ್ಷಗಳು ಏನು ಮಾಡಿವೆಯೆಂಬುದನ್ನು ರಾಜ್ಯದ ಜನರು ಚೆನ್ನಾಗಿಯೆ ಅರಿತಿದ್ದಾರೆ. ಹಾಗಾಗಿ, ವಿಪಕ್ಷಗಳ ಪಾದಯಾತ್ರೆಗೆ ಅಷ್ಟಾಗಿ ಗಮನ ನೀಡಬೇಕಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರು ರಾಜಕೀಯ ಪ್ರವೇಶ ಮಾಡಿದಾಗ ಇದ್ದ ಆಸ್ತಿ ಎಷ್ಟು, ಈಗ ಇರುವ ಆಸ್ತಿ ಎಷ್ಟು ಎಂಬುದನ್ನು ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ, ಬಿ.ವೈ.ವಿಜಯೇಂದ್ರ ಬಹಿರಂಗಪಡಿಸಲಿ. ಬಿಜೆಪಿ ಅವಧಿಯಲ್ಲಾದ ಗಣಿ ಅಕ್ರಮ, ಕೊರೋನಾ ವೇಳೆ ಉಪಕರಣ ಖರೀದಿ ಹಗರಣ, ಇತರೆ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಪ್ರಶ್ನಿಸಲು ಕಾಂಗ್ರೆಸ್ ಪಕ್ಷವು ಸಿದ್ಧವಾಗಿದೆ. ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ ಬಿಜೆಪಿ ರಾಜಕೀಯ ನಾಟಕವನ್ನೆಲ್ಲಾ ಜನ ನಂಬುವುದೂ ಇಲ್ಲ ಎಂದು ಅವರು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಂತರ ಆ ಸ್ಥಳವನ್ನು ಶುಚಿಗೊಳಿಸಿದ್ದು, ಶುದ್ಧೀಕರಣ ಮಾಡಿದ್ದೇವೆಂದಿದ್ದು ಪ್ರಜಾಪ್ರಭುತ್ವ ವಿರೋಧಿ ವರ್ತನೆಯಾಗಿದೆ. ಇಂತಹ ಕಾರ್ಯ ಕೈಗೊಂಡ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬದಲಿಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆಯೇ ಎಫ್ಐಆರ್ ದಾಖಲು ಮಾಡಿದ್ದು ಸರಿಯಲ್ಲ ಎಂದು ಡಿ.ಬಸವರಾಜ ಆಕ್ಷೇಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.