ವಿರೋಧ ಪಕ್ಷದವರಿಗೆ ನನ್ನನ್ನು, ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಧಾನಸಭೆ ಅಧಿವೇಶನ ನಡೆಸಲು ಬಿಡುತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ವಿರೋಧ ಪಕ್ಷದವರಿಗೆ ನನ್ನನ್ನು, ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಧಾನಸಭೆ ಅಧಿವೇಶನ ನಡೆಸಲು ಬಿಡುತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಬೆಂಗಳೂರು ಶಾಖೆ ಆಯೋಜಿಸಿರುವ 2 ದಿನಗಳ ಸಂವಾದ-2026 ಉದ್ಘಾಟಿಸಿ ಮುಖ್ಯಮಂತ್ರಿ ಮಾತಾಡಿದರು.
ಕಾರ್ಯಕ್ರಮಕ್ಕೆ ಒಪ್ಪಿಕೊಂಡಾಗ ಅಧಿವೇಶನ ನಡೆಯುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಆದರೆ, ಈಗ ಅಧಿವೇಶನ ನಡೆಯುತ್ತಿದೆ. ವಿರೋಧ ಪಕ್ಷದ ಬಿಜೆಪಿ ಸ್ನೇಹಿತರಿಗೆ ನನ್ನನ್ನು ಹಾಗೂ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಆಲೋಚನೆಗಳು ಸ್ಪಷ್ಟವಾಗಿದ್ದು, ನಮ್ಮ ಸರ್ಕಾರ ಜನಸಾಮಾನ್ಯರ ವಿಚಾರದಲ್ಲಿ ಕೈಗೊಳ್ಳುತ್ತಿರುವ ನೀತಿಗಳಿಂದಾಗಿ ಅವರಿಗೆ ನನ್ನ ವಿರುದ್ಧ ಹೋರಾಟ ಮಾಡಲು ಯಾವುದೇ ಅವಕಾಶಗಳಿಲ್ಲ. ಅಸೂಯೆಗೆ ಮದ್ದಿಲ್ಲ. ಹೀಗಾಗಿ, ಅವರು ನಮಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಸಾವಿರಾರು ಕೋಟಿ ರು. ವೆಚ್ಚ:
ನಮ್ಮ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ರು. ವೆಚ್ಚವಾಗುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ 20,000 ಕೋಟಿ ರು. ಉಚಿತ ವಿದ್ಯುತ್ ನೀಡುತ್ತಿದ್ದು, ಬೇರೆ ಬೇರೆ ಪಿಂಚಣಿಗಳನ್ನು ನೀಡುತ್ತಿದ್ದೇವೆ. ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದೇವೆ. ನಮ್ಮ ಮಾದರಿಯನ್ನು ಪ್ರಧಾನ ಮಂತ್ರಿ ಟೀಕಿಸಿದರು. ಆದರೆ, ನಂತರ ಬೇರೆ ರಾಜ್ಯಗಳಲ್ಲಿ ಅದನ್ನೇ ಪಾಲಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.ಪ್ರಾಮಾಣಿಕ ತೆರಿಗೆದಾರರಿಗೆ ಐಟಿ ಅಧಿಕಾರಿಗಳಿಂದ ಕಿರುಕುಳ: ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಅಧಿಕಾರಿಗಳು ಕಿರುಕುಳ ನೀಡಿ ಕುಗ್ಗಿಸುತ್ತಾರೆ. ತೊಂದರೆ ಕೊಡುವುದೇ ಅಧಿಕಾರಿಗಳ ಕೆಲಸ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಬೆಂಗಳೂರು ಶಾಖೆ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ಸಂವಾದ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಐಟಿ, ಇ.ಡಿ, ಸಿಬಿಐ ಸಹವಾಸ ಸಾಕೆಂದು ದೇಶದ 12 ಲಕ್ಷ ಉದ್ಯಮಿಗಳು ದೇಶ ತ್ಯಜಿಸಿದ್ದಾರೆ. ಅವರು ಕಳ್ಳತನ ಮಾಡುವವರನ್ನು ಪ್ರಶ್ನಿಸುವುದಿಲ್ಲ ಎಂದ ಸಿಎಂ, ಕೆಲ ವರ್ಷಗಳ ಹಿಂದೆ ಗುಜರಾತ್‌ಗೆ ಹೋಗಿದ್ದಾಗ ಅಲ್ಲಿ ಶೇ.70ರಷ್ಟು ವ್ಯವಹಾರ ನಗದಿನಲ್ಲೇ ನಡೆಯುತ್ತಿತ್ತು. ಶೇ.30ರಷ್ಟು ಮಾತ್ರ ವೈಟ್‌ನಲ್ಲಿ ನಡೆಯುತ್ತಿತ್ತು. ನಮ್ಮ ಕರ್ನಾಟಕದಲ್ಲಿ ಶೇ.90ರಷ್ಟು ವ್ಯವಹಾರಗಳು ವೈಟ್ ಮೂಲಕ ನಡೆಯುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಶಿಸ್ತುಬದ್ಧರಾಗಿದ್ದೇವೆ ಎಂದರು.ರಾಜ್ಯ ಸರ್ಕಾರದ ಆದಾಯ ಹೆಚ್ಚಳಕ್ಕೆ ಹಾಗೂ ಆದಾಯ ಸೋರಿಕೆ ಸರಿಪಡಿಸಿಕೊಳ್ಳಲು ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆಯಿಂದ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಹೇಳಿದರು.
ಸಲಹೆ-ಸೂಚನೆ ನೀಡಿ:
ರಾಜ್ಯ ಸರ್ಕಾರದ ಆದಾಯ ಹೆಚ್ಚಳಕ್ಕೆ ಹಾಗೂ ಆದಾಯ ಸೋರಿಕೆ ಸರಿಪಡಿಸಿಕೊಳ್ಳಲು ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆಯಿಂದ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಬೇಕು. ನಮ್ಮ ತಪ್ಪುಗಳು, ಸಂಪನ್ಮೂಲ ಸೋರಿಕೆ ತಡೆಗಟ್ಟಲು ನಿಮ್ಮ ಸಲಹೆ ನೀಡಿ. ನಮ್ಮ ಬದುಕು, ಆಸ್ತಿ ರಕ್ಷಿಸಿ ಆದಾಯಕ್ಕೆ ಮಾರ್ಗದರ್ಶನ ನೀಡಬೇಕು. ನಮ್ಮ ತಪ್ಪುಗಳನ್ನು ನಿವಾರಣೆ ಮಾಡುವ ಸಾಮರ್ಥ್ಯ ನಿಮಗಿದೆ. ನೀವು ದೇಶ ಕಟ್ಟುತ್ತಿದ್ದು, ನಿಮ್ಮ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ನುಡಿದರು.ಕರ್ನಾಟಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ನಿಮ್ಮ ಮಾರ್ಗದರ್ಶನವಿಲ್ಲದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ದಕ್ಷಿಣ ಭಾರತ ಇಡೀ ದೇಶದ ಪ್ರಗತಿಯ ಇಂಧನವಾಗಿದೆ. ದಕ್ಷಿಣ ಭಾರತವಿಲ್ಲದೆ ಭಾರತದ ಪ್ರಗತಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದೆ ನಾವು ವಾದ ಮಂಡಿಸಿದ್ದೇವೆ. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕರ್ನಾಟಕ ಅತ್ಯುತ್ತಮ ಕೇಂದ್ರ:ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್‌ಪೋರ್ಟ್‌ದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರುವ ಬಂಡವಾಳ ಹೂಡಿಕೆದಾರರಿಗೆ ನೀವು ಉತ್ತಮ ಸಲಹೆ ನೀಡುತ್ತಿದ್ದೀರಿ. ಹೊಸ ಹೂಡಿಕೆ, ಉದ್ಯಮ, ಉದ್ಯೋಗ ಸೃಷ್ಟಿ, ಅನ್ವೇಷಣೆ, ರಫ್ತಿಗೆ ಕರ್ನಾಟಕ ಅತ್ಯುತ್ತಮ ಕೇಂದ್ರವಾಗಿದೆ. ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಭಾರತದ ಸಾಫ್ಟ್‌ವೇರ್ ರಪ್ತಿನಲ್ಲಿ ಶೇ.42ರಷ್ಟು ಪಾಲು ಹೊಂದಿದೆ. ಇಲ್ಲಿರುವ ಪ್ರತಿಭೆಗಳನ್ನು ನೋಡಿ ವಿಶ್ವದ ಪ್ರಮುಖ 500 ಕಂಪನಿಗಳು ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಬೆಂಗಳೂರು ಶಾಖೆ ಅಧ್ಯಕ್ಷೆ ಸಿ.ಎ.ಕವಿತಾ ಪರಮೇಶ್ ಮಾತನಾಡಿ, ವಸಂತನಗರದ ಐಸಿಎಐ ಕಚೇರಿ ಆವರಣದ ಲೀಸ್ ನವೀಕರಣ ಮಾಡಬೇಕು. ಬೆಂಗಳೂರಿನಲ್ಲಿ ಸೂಕ್ತ ನಿವೇಶನ ಮಂಜೂರು ಮಾಡಬೇಕು. ಸಂಸ್ಥೆ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮತ್ತು ಶಾಶ್ವತ ಮೂಲಸೌಕರ್ಯದ ಅಗತ್ಯವಿದೆ ಎಂದರು. ಜಾಗಕ್ಕೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.